ಮಂಗಳವಾರ, ಅಕ್ಟೋಬರ್ 20, 2020
21 °C
ಪೂರ್ವಭಾವಿ ಸಭೆಯಲ್ಲಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಸಾಯಿರಾಂ

ಮಂಗಳೂರು: ಮಾರ್ಗಸೂಚಿಯಂತೆ ದಸರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19ಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪಾಲಿಸಿಕೊಂಡು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದರು.

ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ನಗರದ ಕುದ್ರೋಳಿ ಕ್ಷೇತ್ರದ ಸಭಾಭವನದಲ್ಲಿ ಭಾನುವಾರ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಅಭಿಲಾಷೆ, ಮಾರ್ಗದರ್ಶನದಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಧಾರ್ಮಿಕ ನಂಬಿಕೆ, ಸಂಪ್ರದಾಯದ ಪ್ರಕಾರ ದಸರಾ ಮಹೋತ್ಸವ ನಡೆಯಲಿದೆ ಎಂದರು.

ಈ ಬಾರಿ ಮಂಗಳೂರು ದಸರಾಹಿಂದಿನಂತೆ ವೈಭವದಿಂದ ನಡೆಸಲು ಸಾಧ್ಯವಿಲ್ಲ. ದಸರಾ ಸಂದರ್ಭದಲ್ಲಿ ಕ್ಷೇತ್ರದ ಭೇಟಿ ನೀಡುವ ಭಕ್ತರಿಗೆ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್‌ ಸ್ಕ್ಯಾನ್ ಬಳಸಲು ಸೂಚನೆ ನೀಡಲಾಗುವುದು. ಇದಕ್ಕೆ ನಿರ್ದೇಶನ ನೀಡಲು ನಿತ್ಯ 150ರಿಂದ 200 ಸ್ವಯಂಸೇವಕರ ತಂಡ ರಚಿಸಲಾಗುವುದು ಎಂದರು.

ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ರವಿಶಂಕರ್ ಮಿಜಾರು ಮಾತನಾಡಿ, ಕೋವಿಡ್ ಸಂಕಷ್ಟ ಮಧ್ಯೆಯೂ ಸಂಪ್ರದಾಯದ ಪ್ರಕಾರ ದೇವರ ಸೇವೆಯನ್ನು ನಡೆಸುವುದು ಅನಿವಾರ್ಯವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಆಗಮನ-ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ದಸರಾ ಯಶಸ್ವಿಯಾಗಲು ಎಲ್ಲರ ಸಹಕಾರವೂ ಅಗತ್ಯ ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾಜರಿದ್ದ ನಾನಾ ಸಂಘ–ಸಂಸ್ಥೆಗಳ ಮುಖಂಡರು, ಕ್ಷೇತ್ರದ ಭಕ್ತಾದಿಗಳು, ಸಲಹೆ– ಸೂಚನೆ ನೀಡಿದರು.

ಉದ್ಯಮಿ ಶೈಲೇಂದ್ರ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ರಮಾನಾಥ್ ಕಾರಂದೂರು, ರಾಧಾಕೃಷ್ಣ ಅಶೋಕನಗರ, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಲೀಲಾಕ್ಷ ಕರ್ಕೇರ ಇದ್ದರು.

‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷಣೆ

ಮಂಗಳೂರು ದಸರಾ ಮಹೋತ್ಸವವನ್ನು ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದೊಂದಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದರು.

‘ಮಂಗಳೂರು ದಸರಾ ಸಂದರ್ಭದಲ್ಲಿ ಪೂಜೆ, ಪುರಸ್ಕಾರ, ಪ್ರಸಾದ ವಿತರಣೆ, ಮಕ್ಕಳು, ಹಿರಿಯರ ಸುರಕ್ಷತೆ ಸೇರಿದಂತೆ ಪ್ರತಿಯೊಂದು ವಿಚಾರ ಗಮನದಲ್ಲಿಟ್ಟು ಕ್ಷೇತ್ರದ ಆಡಳಿತ ಮಂಡಳಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಮಂಗಳೂರು ದಸರಾ ನಮ್ಮೆಲ್ಲರ ಉತ್ಸವ, ಪ್ರತಿಯೊಬ್ಬರು ನಮ್ಮ ಸುರಕ್ಷತೆಗೆ ಒತ್ತು ನೀಡುವುದರ ಜೊತೆಗೆ ಉತ್ಸವ ಯಶಸ್ವಿಯಾಗಿ ನಡೆಸೋಣ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು