ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mangaluru Kambala: ಡಿ. 30ರಂದು ಏಳನೇ ವರ್ಷದ ಮಂಗಳೂರು ಕಂಬಳ

Published 28 ಡಿಸೆಂಬರ್ 2023, 15:37 IST
Last Updated 28 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಇದೇ 30ರಂದು ಏಳನೇ ವರ್ಷದ ಮಂಗಳೂರು ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಅವರು, ‘30ರಂದು ಬೆಳಿಗ್ಗೆ 8.30 ಕಂಬಳವನ್ನು  ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ‌ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸುವರು.  ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿದ ಅಧ್ಯಕ್ಷ ಕೆ.ಚಿತ್ತರಂಜನ್, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭಾಗವಹಿಸುವರು’ ಎಂದರು.

‘ಅದೇ ದಿನ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ   ಯು.ಟಿ. ಖಾದರ್, ಎಂ.ಆರ್.ಜಿ. ಗ್ರೂಪ್‌ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು ಭಾಗವಹಿಸುವರು’ ಎಂದರು.

‘ಈ ಸಲ 150ಕ್ಕೂ ಹೆಚ್ಚು ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಹಗ್ಗ ಕಿರಿಯ ವಿಭಾಗವೊಂದರಲ್ಲೇ 70ಕ್ಕೂ ಹೆಚ್ಚು ಜೊತೆ ಕೋಣಗಳು ಭಾಗವಹಿಸಬಹುದು. ಪ್ರೇಕ್ಷರಿಗಾಗಿ ಎರಡು ಗ್ಯಾಲರಿ ನಿರ್ಮಿಸಲಾಗಿದೆ. ‌ವಾಹನ‌ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ನಿವಾಸಿಗಳಿಗೆ ನಮ್ಮ ನೆಲದ ಸಂಸ್ಕೃತಿಯನ್ನು ಪರಿಚಯಿಸುವುದು ನಮ್ಮ ಉದ್ದೇಶ’ ಎಂದರು.

ಕಂಬಳ ಸಮಿತಿ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ, ‘ಕಂಬಳದ ಅಂಗವಾಗಿ ಕಲರ್‌ಕೂಟ ಚಿತ್ರ ಸ್ಪರ್ಧೆ ನಡೆಯಲಿದೆ.  10 ವರ್ಷದವರೆಗಿನವರು ‘ರಂಗ್‌ದ ಎಲ್ಯ’, 10ರಿಂದ 15 ವರ್ಷದವರು ‘ರಂಗ್‌ದ ಮಲ್ಯ’ ವಿಭಾಗದಲ್ಲಿ ಭಾಗವಹಿಸಬಹುದು.  ರಂಗ್‌ದ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಾಫಿ ಸ್ಪರ್ಧೆ ಹಾಗೂ ರೀಲ್ಸ್‌ ಸ್ಪರ್ಧೆಗಳು ನಡೆಯಲಿವೆ. ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala7 ಎಂಬ ಹ್ಯಾಷ್ ಟ್ಯಾಗ್‌ ಬಳಸಬೇಕು’ ಎಂದರು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಕೋಶಾಧಿಕಾರಿ ಪ್ರೀತಮ್ ರೈ, ಉಪಾಧ್ಯಕ್ಷ ಸಂಜಯ್ ಪ್ರಭು, ಅಜಿತ್ ಬೋಪಯ್ಯ, ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ ಪ್ರಕಾಶ್‌ ಗರೋಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT