ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಸಾಹಿತ್ಯ ಉತ್ಸವ ಫೆಬ್ರುವರಿ 18ರಿಂದ

ಈ ಬಾರಿಯ ಪ್ರಶಸ್ತಿಗೆ ತುಕಾರಾಮ್ ಪೂಜಾರಿ ಆಯ್ಕೆ
Last Updated 15 ಫೆಬ್ರುವರಿ 2023, 5:11 IST
ಅಕ್ಷರ ಗಾತ್ರ

ಮಂಗಳೂರು: ಭಾರತ್‌ ಫೌಂಡೇಷನ್‌ ಆಶ್ರಯದಲ್ಲಿ ಇದೇ 18 ಮತ್ತು 19 ರಂದು ಇಲ್ಲಿನ ಟಿಎಂಎ ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ‘ಮಂಗಳೂರು ಸಾಹಿತ್ಯ ಉತ್ಸವದ (ಮಂಗಳೂರು ಲಿಟ್‌ ಫೆಸ್ಟ್‌) ಐದನೇ ಆವೃತ್ತಿಯನ್ನು ಏರ್ಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಫೌಂಡೇಷನ್‌ನ ಟ್ರಸ್ಟಿ ಸುನಿಲ್‌ ಕುಲಕರ್ಣಿ, ‘ಭಾರತದ ಪರಿಕಲ್ಪನೆ’ ಎಂಬ ಧ್ಯೇಯದಲ್ಲಿ ನಡೆಯುವ ಈ ಸಾಹಿತ್ಯ ಹಬ್ಬದಲ್ಲಿ ಸಿನಿಮಾ ನಿರ್ದೇಶಕ ರಿಷಬ್‌ ಶೆಟ್ಟಿ, ನಟ ಪ್ರಕಾಶ್‌ ಬೆಳವಾಡಿ, ಸ್ಮಿತಾ ಪ್ರಕಾಶ್‌, ಶಿವ್‌ ಆರೂರ್‌, ರಂಗಕರ್ಮಿಗಳಾದ ಅಡ್ಡಂಡ ಕಾರ್ಯಪ್ಪ, ಬಾಸುಮಾ ಕೊಡಗು, ದಕ್ಕಲ ಮುನಿಸ್ವಾಮಿ ಸೇರಿದಂತೆ 55ಕ್ಕೂ ಹೆಚ್ಚು ವಾಗ್ಮಿಗಳು ಭಾಗವಹಿಸಲಿದ್ದಾರೆ' ಎಂದರು.

‘ಸಾಹಿತ್ಯ ಉತ್ಸವದಲ್ಲಿ ಪ್ರತಿ ಸಲವೂ ಒಬ್ಬ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾದ ತುಕಾರಾಮ್ ಪೂಜಾರಿ ಅವರನ್ನು ಈ ಸಲದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಒಟ್ಟು 25 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಗೋಷ್ಠಿಯ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆಯೂ ಇರಲಿದ್ದು, ಗೆದ್ದವರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡುತ್ತೇವೆ. ತುಳು, ಕೊಂಕಣಿ, ಅರೆಭಾಷೆ, ಯಕ್ಷಗಾನಕ್ಕೆ ಸಂಬಂಧಿಸಿದ ಗೋಷ್ಠಿಗಳೂ ಇರಲಿವೆ. ಪಟ್ಲ ಸತೀಶ ಶೆಟ್ಟಿ, ಇಂದಿರಾ ಹೆಗಡೆಯಂತಹ ತಜ್ಞರು ಈ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಈ ಬಾರಿ ಎರಡು ಸಿನಿಮಾ ಪ್ರದರ್ಶಿಸಲಿದ್ದೇವೆ. 16 ಪುಸ್ತಕ ಮಳಿಗೆಗಳು ಇರಲಿವೆ. ತುಳು ಲಿಪಿಯಲ್ಲಿ ಹೆಸರು ಬರೆಯುವುದನ್ನು ಕಲಿಸುವ ಕಾರ್ಯಾಗಾರ ಇರಲಿದೆ. ಒಟಿಟಿ ಹಾಗೂ ಕಾರ್ಟೂನ್‌ ಲೋಕದಲ್ಲಿ ಮುಳುಗಿರುವ ಮಕ್ಕಳಲ್ಲಿ ಮತ್ತೆ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ. ಮಕ್ಕಳಿಗೆ ಆಸಕ್ತಿದಾಯಕವಾಗಿ ಕತೆ ಹೇಳುವುದನ್ನು ಕಲಿಸಲೆಂದೇ ವಿಶೇಷ ಗೋಷ್ಠಿ ಇದೆ. ಲೇಖಕರೊಂದಿಗೆ ಅನೌಪಚಾರಿಕ ಸಂವಾದ ನಡೆಸಲು ಹರಟೆ ಕಟ್ಟೆ ಎಂಬ ವಿಶೇಷ ವ್ಯವಸ್ಥೆ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಅಮೃತ ಕಾಲದಲ್ಲಿ ಭಾರತದ ಪರಿಕಲ್ಪನೆ: ಸನ್ಮಾರ್ಗದ ಪುನರುತ್ಥಾನ– ಭವಿಷ್ಯದ ಹಾದಿ’ ಎಂಬ ಆಶಯದೊಂದಿಗೆ ಉದ್ಘಾಟನಾ ಗೋಷ್ಠಿ ನಡೆಯಲಿದೆ. ಚಿಂತಕರಾದ ಆರ್‌.ಜಗನ್ನಾಥ್‌, ವಿ.ನಾಗರಾಜ್‌ ಹಾಗೂ ಉದ್ಯಮಿ ಎನ್‌.ವಿನಯ ಹೆಗ್ಡೆ ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾರತ್‌ ಫೌಂಡೇಷನ್‌ನ ಟ್ರಸ್ಟಿಗಳಾದ ಕ್ಯಾ, ಬ್ರಿಜೇಶ್ ಚೌಟ, ಸಂಜಯ್ ಪ್ರಭು, ಆಯೋಜಕ ಸಮಿತಿ ಸದಸ್ಯರಾದ ಸುಜೀರ್ ಪ್ರತಾಪ್, ಈಶ್ವರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT