ಶನಿವಾರ, ಫೆಬ್ರವರಿ 4, 2023
28 °C
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮೇಲೆ ಹಲವರು ಕಣ್ಣು

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ: ಫಲಿಸಿತೇ ಟಿಕೆಟ್ ಗಿಟ್ಟಿಸುವ ತಂತ್ರ?

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ರದ್ದತಿಗೆ ಸುದೀರ್ಘ 35 ದಿನಗಳ ಧರಣಿ ಹಾಗೂ ಪೇಟೆಯ ನಡುವಿನಲ್ಲಿ ನಡೆದ ಯುವಕನೊಬ್ಬನ ಹತ್ಯೆ ಇವೆರಡು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು, ಮುಂಬರುವ ವಿಧಾನಸಭೆ ಚುನಾವಣೆಯ ಟಿಕೆಟ್‌ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯ ಪ್ರಯೋಗಶಾಲೆಯಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ, ಇಬ್ಬರು ಮಹಿಳೆಯರು ಸೇರಿದಂತೆ 11 ಜನರು ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರೆ, ಬಿಜೆಪಿಯಲ್ಲಿ ಹಾಲಿ ಶಾಸಕರ ಜತೆ ಹೊಸಬರು ಕೂಡ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಸಚಿವ ಶ್ರೀಕೃಷ್ಣ ಪಾಲೆಮಾರ್ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿತರು ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ, ಕಾಂಗ್ರೆಸ್‌ನಿಂದ ಕೆಪಿಸಿಸಿಗೆ ಅತಿಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಕ್ಷೇತ್ರ ಮಂಗಳೂರು ಉತ್ತರ. ಮಾಜಿ ಸಚಿವ ಮೊಹಿಯುದ್ದೀನ್ ಬಾವ ಅವರು ಎಲ್ಲ ಸಮುದಾಯಗಳ ಧಾರ್ಮಿಕ ಕಾರ್ಯಕ್ರಮಗಳು, ಬೂತಕೋಲ, ಯಕ್ಷಗಾನ, ಶುಭ ಸಮಾರಂಭಗಳಿಗೆ ಭೇಟಿ ನೀಡುತ್ತ ಜನರ ನಡುವೆ ಸೌಹಾರ್ದ ಭಾವ ಬಿತ್ತುವ ಯತ್ನದಲ್ಲಿದ್ದಾರೆ. ಉದ್ಯಮಿ ಇನಾಯತ್ ಅಲಿ ಕೂಡ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ. ವರ್ಷದ ಹಿಂದಿನಿಂದ ಚುನಾವಣೆಗೆ ಅಣಿಯಾಗಿಯಾಗುತ್ತಿರುವ ಅವರು, ಸಮಾಜ ಸೇವೆ, ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಹೆಚ್ಚು ಕಾಣಿಸಿಕೊಂಡು, ಮುಂದಿನ ಅಭ್ಯರ್ಥಿ ತಾನೇ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಹಿಂದೂ ದೇವಾಲಯಗಳು, ದೈವಸ್ಥಾನಗಳು, ಚರ್ಚ್, ಮಸೀದಿ ಹೀಗೆ ಎಲ್ಲ ಸಮುದಾಯಗಳ ಧಾರ್ಮಿಕ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತ ಮತದಾರರಲ್ಲಿ ಪರೋಕ್ಷವಾಗಿ ಭರವಸೆ ಬಿತ್ತುತ್ತಿದ್ದಾರೆ.

ಮಾಜಿ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಕವಿತಾ ಸನಿಲ್‌ ಕೂಡ ಟಿಕೆಟ್ ಆಕಾಂಕ್ಷಿಗಳು. ಇದಕ್ಕೆ ಪೂರಕವಾಗಿ ಅವರು ಅನೇಕ ಹೋರಾಟಗಳು, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಿದವರ ಹೊರತಾಗಿ ಕಾಂಗ್ರೆಸ್ ಮುಖಂಡರು, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಹಾಗೂ ಶ್ರೀಕೃಷ್ಣ ಪಾಲೆಮಾರ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಖಚಿತ ಮೂಲಗಳಿಂದ ಲಭ್ಯವಾಗಿದೆ.

ವೇದಿಕೆಯಾದ ಟೋಲ್‌ಗೇಟ್ ಹೋರಾಟ: ಸಮಾನ ಮನಸ್ಕ ಸಂಘಟನೆಗಳ ಬ್ಯಾನರ್‌ನಲ್ಲಿ ನಡೆದ ಸುರತ್ಕಲ್ ಟೋಲ್‌ಗೇಟ್ ರದ್ದತಿ ಹೋರಾಟವು ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಗೆ ವೇದಿಕೆ ಒದಗಿಸಿಕೊಟ್ಟಿತು. ಟಿಕೆಟ್ ಆಕಾಂಕ್ಷಿಗಳೆಲ್ಲ ದಿನಬೆಳಗಾದರೆ ಧರಣಿ ಸ್ಥಳದಲ್ಲಿ ಭರ್ಜರಿ ಭಾಷಣ ಮಾಡಿ, ಮತದಾರರ ಗಮನಸೆಳೆಯಲು ಯತ್ನಿಸಿದ್ದು ಬಹಿರಂಗ ಗುಟ್ಟಾಗಿರುವುದು ಸುಳ್ಳಲ್ಲ. 

ಕ್ಷೇತ್ರದಲ್ಲಿ ಬಿಲ್ಲವರು, ಅಲ್ಪಸಂಖ್ಯಾತರು, ಬಂಟರ ಮತಗಳು ನಿರ್ಣಾಯಕವಾಗಿವೆ. ಹಾಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದವರು. ಮತದ ಮೇಲೆ ಕಣ್ಣಿಟ್ಟು ಪಕ್ಷ ಮತ್ತೆ ಅವರನ್ನು ಕಣಕ್ಕಿಳಿಸಬಹುದು ಎಂಬುದು ಕೆಲವು ಕಾರ್ಯಕರ್ತರ ವಾದವಾದರೆ, ಶಾಸಕರು ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದರೂ, ನಿರೀಕ್ಷಿತ ಅಭಿವೃದ್ಧಿ ಮಾಡಿಲ್ಲ. ಅಲ್ಲದೆ, ಸಂಸದ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರು, ಬೇರೆಯವರಿಗೆ ಟಿಕೆಟ್ ನೀಡುವಂತೆ ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂಬುದು ಇನ್ನು ಕೆಲವು ಕಾರ್ಯಕರ್ತರ ಅಭಿಪ್ರಾಯ.

ಶಾಸಕರು ಹಿಂದುತ್ವದ ಆಧಾರದಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಹಿಂದೂಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವೈಯಕ್ತಿಕವಾಗಿ ನೆರವು, ಸರ್ಕಾರದಿಂದ ದೇವಾಲಯ, ದೈವಸ್ಥಾನಗಳಿಗೆ ದೊಡ್ಡ ಮೊತ್ತದ ಅನುದಾನ ತರುತ್ತಿದ್ದಾರೆ ಎಂದು ಶಾಸಕರ ಆಪ್ತರೊಬ್ಬರು ತಿಳಿಸಿದರು. ಇವೆಲ್ಲದರ ಹೊರತಾಗಿಯೂ ಬಿಜೆಪಿ ಹೈಕಮಾಂಡ್ ಇಲ್ಲಿ ಹೊಸ ಅಭ್ಯರ್ಥಿ ಆಯ್ಕೆ ಮಾಡಿದರೆ ಅಚ್ಚರಿಯೇನಿಲ್ಲ.

ಮತ ಧ್ರುವೀಕರಣ: ಅಲ್ಪಸಂಖ್ಯಾತ ಮತಗಳು ಧ್ರುವೀಕರಣಗೊಂಡರೆ ಕಾಂಗ್ರೆಸ್‌ಗೆ ಹೆಚ್ಚು ಲಾಭ. ಆದರೆ, ಇಲ್ಲಿ ಎಸ್‌ಡಿಪಿಐ ಸಕ್ರಿಯವಾಗಿದ್ದು, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್ ಕುಳಾಯಿ ಹಾಗೂ ಪಕ್ಷದ ಕಾರ್ಯಕರ್ತರು ಮನೆ–ಮನೆ ಸಂಪರ್ಕಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ನೆರವಾಗುವ, ಆ ಮೂಲಕ ಅಲ್ಪಸಂಖ್ಯಾತರ ಮತ ಗಟ್ಟಿಗೊಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಿವೈಎಫ್ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಸಿಪಿಎಂನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು ಕುತೂಹಲದ ಕಣವಾಗಿ ಪರಿಣಮಿಸಿದೆ.

‘ಕ್ಷೇತ್ರದ ಅಭಿವೃದ್ಧಿ ಶ್ರೀರಕ್ಷೆ’
‘ಹಿಂದುತ್ವದ ವಿಚಾರ, ಶಾಸಕರು ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ಚುನಾವಣೆಯ ಸಿದ್ಧತೆ ನಡೆಸಿದ್ದೇವೆ. ಶಾಸಕರು ಅನೇಕ ಒಳರಸ್ತೆಗಳನ್ನು ಅಭಿವೃದ್ಧಿಪಡಿಸಿ, ಜನರ ಮನಗೆದ್ದಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ವ್ಯವಸ್ಥಿತವಾಗಿ ನಡೆದಿದೆ. ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬಿಜೆಪಿ ಮಂಗಳೂರು ಉತ್ತರ ಘಟಕದ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ.

ಟೋಲ್‌ಗೇಟ್ ಹೋರಾಟದಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಇಲ್ಲ. ಇದು ಟೋಲ್‌ಗೇಟ್ ರದ್ದತಿಗಾಗಿ ನಡೆದಿದ್ದಲ್ಲ, ರಾಜಕೀಯಕ್ಕಾಗಿ ನಡೆದ ಹೋರಾಟ. ಈಗ ಎಲ್ಲರೂ ತಮ್ಮಿಂದಾಗಿಯೇ ಟೋಲ್‌ಗೇಟ್ ರದ್ದಾಯಿತು ಎನ್ನುತ್ತಿದ್ದು, ಅವರ ನಡುವೆಯೇ ಭಿನ್ನಾಭಿಪ್ರಾಯ ಮೂಡಿದೆ ಎಂದು ಪ್ರತಿಕ್ರಿಯಿಸಿದರು.

‘ಆಕಾಂಕ್ಷಿಗಳ ಸಂಖ್ಯೆ ಹೆಚ್ಚು’
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದಾಗಿ ಹಲವಾರು ಸಮೀಕ್ಷೆಗಳು ಹೇಳಿವೆ. ಹೀಗಾಗಿ, ಸಹಜವಾಗಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಅಧಿಕಾರದಲ್ಲಿದ್ದಾಗ ಜಾತಿ–ಮತ ಭೇದವಿಲ್ಲದೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಉದ್ಯಮಿ ಇನಾಯಿತ್ ಅಲಿ ಕೂಡ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಕಾಂಗ್ರೆಸ್ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಉಮೇಶ್ ದಂಡಕೇರಿ.

‘ನಾನು ತಂದಿರುವ ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸಲು ಈ ಐದು ವರ್ಷಗಳಲ್ಲಿ ಶಾಸಕರಿಗೆ ಆಗಿಲ್ಲ. ಆಶ್ರಯ ಮನೆ ಇನ್ನೂ ಬಂದಿಲ್ಲ. ಇಲ್ಲಿಗೆ ಮಂಜೂರಾಗಿದ್ದ ಆರ್‌ಟಿಒ ಕಚೇರಿ ಎಲ್ಲಿ ಹೋಗಿದೆ ಗೊತ್ತಿಲ್ಲ’ ಎಂದು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಪ್ರತಿಕ್ರಿಯಿಸಿದರು.

‘ಕಣಕ್ಕಿಳಿಸುವ ಭರವಸೆ’
‘ಕ್ಷೇತ್ರದಲ್ಲಿ ಪಕ್ಷ ಸಂಘಟನೆ ದುರ್ಬಲವಾಗಿರುವುದು ಸತ್ಯ. ಪಕ್ಷದ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದೇವೆ. ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದು ಜೆಡಿಎಸ್ ಮಂಗಳೂರು ಉತ್ತರ ಘಟಕದ ಅಧ್ಯಕ್ಷ ರಫೀಕ್ ಕಾಟಿಪಳ್ಳ ತಿಳಿಸಿದರು.

(ಪೂರಕ ಮಾಹಿತಿ: ನಿರಂಜನ ಹೊಳ್ಳ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು