ಸೋಮವಾರ, ಸೆಪ್ಟೆಂಬರ್ 20, 2021
23 °C

ಮೊಬೈಲ್ ಕಳ್ಳನ ಬಂಧನ: 40 ಸೆಟ್‌ಗಳು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಆ್ಯಪಲ್ ಮೊಬೈಲ್ ಶೋ ರೂಂ ಒಂದರಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮಂಗಳೂರು ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ಕಳ್ಳತನವಾಗಿದ್ದ 40 ಮೊಬೈಲ್‌ ಫೋನ್ ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ಆರೋಪಿಯನ್ನು ಮುಂಬೈನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹41 ಲಕ್ಷ ಮೌಲ್ಯದ ಮೊಬೈಲ್‌ ಫೋನ್ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

‘ಕೆಲದಿನಗಳ ಹಿಂದೆ ನಗರದ ಆ್ಯಪಲ್ ಶೋಂ ರೂಂನಿಂದ ₹60 ಲಕ್ಷ ಮೌಲ್ಯದ 68 ಮೊಬೈಲ್‌ ಫೋನ್ ಸೆಟ್‌ಗಳು ಕಳವಾಗಿರುವುದಾಗಿ ದೂರು ದಾಖಲಾಗಿತ್ತು. ಈ ಕೃತ್ಯವನ್ನು ಇಬ್ಬರು ಆರೋಪಿಗಳು ಎಸಗಿರುವುದು ಪತ್ತೆಯಾಗಿದೆ, ಒಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ವಿರುದ್ಧ ಮುಂಬೈನಲ್ಲಿ ಕಳ್ಳತನ ಸೇರಿ 9ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ’ ಎಂದು ಅವರು ಮಾಹಿತಿ ನೀಡಿದರು.

ಸಿಸಿಬಿ ತಂಡ ಆರೋಪಿಗಳ ಪತ್ತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವ ಹಿಸಿದೆ ಎಂದ ಶಶಿಕುಮಾರ್, ತಂಡಕ್ಕೆ ಪ್ರೋತ್ಸಾಹ ಧನವಾಗಿ ₹ 10 ಸಾವಿರ ನಗದು ಬಹುಮಾನವನ್ನು ಘೋಷಿಸಿದರು. ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಇದ್ದರು.

ಇಬ್ಬರ ಬಂಧನ

ವಿಟ್ಲ: ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯಲ್ಲಿ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಮಾಣಿಲ ಗ್ರಾಮದ ಕೊಡಂದೂರು ನಿವಾಸಿ ವಿಜಯ ಕುಮಾರ್ ಕ್ರಾಸ್ತಾ(40) ಮತ್ತು ಮಂಜೇಶ್ವರ ತಾಲ್ಲೂಕಿನ ಸೀಥನ್ಗೊಲಿ ಬೆದ್ರಂಪಲ್ಲ ನಿವಾಸಿ ಜಯಪ್ರಕಾಶ್ (40) ಬಂಧಿತ ಆರೋಪಿಗಳು.

ಸಂಘದ ಚಾವಣಿ ಹಂಚನ್ನು ಕಳ್ಳರು ತೆಗೆದು ಒಳಗಡೆ ಹೋಗಿ ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದರು. ಆದರೆ, ಯಾವುದೇ ಹಣ, ಬೆಲೆ ಬಾಳುವ ವಸ್ತು ಸಿಕ್ಕಿರಲಿಲ್ಲ. ಘಟನೆ ಬಗ್ಗೆ ಸಂಘದ ಮಾಣಿಲ ಶಾಖೆ ವ್ಯವಸ್ಥಾಪಕ ಜಯರಾಮ ದೂರು ನೀಡಿದ್ದರು.

ಘಟನೆ ನಡೆದು ಎರಡು ದಿನಗಳಲ್ಲಿ ವಿಟ್ಲ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಇ. ನಾಗರಾಜ್ ಮಾರ್ಗದರ್ಶನದಲ್ಲಿ ವಿಟ್ಲ ಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಪ್ರಸನ್ನ, ಹೇಮರಾಜ್, ಪ್ರತಾಪ್ ರೆಡ್ಡಿ, ಲೋಕೇಶ್‌ ಅವರ ತಂಡ ಆರೋಪಿ ಗಳನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.