ಶುಕ್ರವಾರ, ಜನವರಿ 27, 2023
26 °C

ಸುರತ್ಕಲ್‌: ಪೊಲೀಸ್‌ ಕೋಟೆ ಭೇದಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಹೋರಾಟಗಾರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ಗೇಟ್‌ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರರು ಪೊಲೀಸ್‌ ಸರ್ಪಗಾವಲನ್ನು ಭೇದಿಸಿ ಟೋಲ್‌ ಬೂತ್‌ಗೆ ಮಂಗಳವಾರ ಮುತ್ತಿಗೆ ಹಾಕಿದರು.

ಟೋಲ್‌ಗೇಟ್‌ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕೋಟೆ ಕಟ್ಟಿನಿಂತಿದ್ದ ಪೊಲೀಸರನ್ನು ತಳ್ಳಿ ಮುನ್ನುಗ್ಗಿದ್ದ ಪ್ರತಿಭಟನಾಕಾರರು ಟೋಲ್‌ ಬೂತ್‌ಗಳನ್ನು ಸುತ್ತುವರಿದರು. ಟೋಲ್‌ ಬೂತ್‌ ಒಂದರ ಮೇಲೇರಿ ಘೋಷಣೆ ಕೂಗಿದರು. ಒಂದು ಬೂತ್‌ನ ಗಾಜನ್ನೂ ಒಡೆದರು. ಅಷ್ಟರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಕರೆಯ ಮೇರೆಗೆ ನಡೆದ ಈ ನಿರ್ಣಾಯಕ ಪ್ರತಿಭಟನೆಯಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಪ್ರತಿಭಟನೆ ವೇಳೆ 600ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಟೋಲ್‌ಗೇಟ್‌ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.  ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ 9ಕ್ಕೆ ಪ್ರತಿಭಟನಾಕಾರರು ಸೇರಿದ್ದರು. ಶಾಂತಿಯುತವಾಗಿಯೇ ಆರಂಭವಾದ ಪ್ರತಿಭಟನೆ ಬಳಿಕ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಏಕಾಏಕಿ ಟೋಲ್‌ಗೇಟ್‌ನತ್ತ ಮುನ್ನುಗ್ಗಿದ್ದರು. ಬ್ಯಾರಿಕೇಡ್‌ಗಳನ್ನು ತಳ್ಳಿ, ಟೋಲ್‌ಬೂತ್‌ನತ್ತ ನುಗ್ಗಿ ಬಂದ ಪ್ರತಿಭಟಕಾರರನ್ನು ಪೊಲೀಸರು ತಡೆಯಲು ಯತ್ನಿಸಿದರಾದರೂ, ಪ್ರಯೋಜನವಾಗಲಿಲ್ಲ.

ಲೂಟಿಕೋರರನ್ನು ಬಂಧಿಸಿ, ನಮ್ಮನ್ನಲ್ಲ: ಈ ವೇಳ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತು. ಕೆಲವರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು. ತಮ್ಮನ್ನು ಬಂಧಿಸಲು ಬಂದ ಪೊಲೀಸರನ್ನು ತಳ್ಳಿದರು. ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತದ್ದೇವೆ. ‘ನಮ್ಮ ಹೋರಾಟ ಟೋಲ್‌ ಗೇಟ್‌ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಯ ವಿರುದ್ಧ. ಧೈರ್ಯವಿದ್ದರೆ ಲೂಟಿಕೋರರನ್ನು ಬಂಧಿಸಿ, ನಮ್ಮನ್ನಲ್ಲ’ ಎಂದು ಪೊಲೀಸರಿಗೇ ಸವಾಲು ಹಾಕಿದರು. 

ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, ಬಿ.ಕೆ.ಇಮ್ತಿಯಾಜ್‌, ಕಾಂಗ್ರೆಸ್‌ ಮುಖಂಡರಾದ ವಿನಯ್‌ ಕುಮಾರ್‌ ಸೊರಕೆ, ಮಿಥುನ್‌ರೈ, ಐವನ್‌ ಡಿಸೋಜಾ, ಶಕುಂತಳಾ ಶೆಟ್ಟಿ, ಮೊಯ್ದಿನ್‌ ಬಾವ,  ಜೆ.ಆರ್‌.ಲೋಬೊ, ಪಿ.ವಿ.ಮೋಹನ್‌, ಪ್ರತಿಭಾ ಕುಳಾಯಿ, ಕುಳಾಯಿ, ಶಶಿಧರ್‌ ಹೆಗ್ಡೆ, ಶಾಲೆಟ್‌ ಪಿಂಟೊ, ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ, ಬಿಲ್ಲವ ಮುಖಂಡ ಪದ್ಮರಾಜ್‌ ಸೇರಿದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಪ್ರತಿಭಟನಾಕಾರರಲ್ಲಿ ಕೆಲವರನ್ನು ಬಸ್‌ಗಳ ಮೂಲಕ ಮಂಗಳೂರಿನ ಪಾಂಡೇಶ್ವರ ಠಾಣೆಗೆ  ಹಾಗೂ ಇನ್ನು ಕೆಲವರನ್ನು ಸುರತ್ಕಲ್‌ ಬಂಟರಭವನಕ್ಕೆ ಕರೆದೊಯ್ದರು.

ಏಕೆ ಹೋರಾಟ?
ಬಿ.ಸಿ.ರೋಡ್‌–ಪಡೀಲ್‌–ಸುರತ್ಕಲ್‌ವರೆಗಿನ ಹೆದ್ದಾರಿಯನ್ನು ನವಮಂಗಳೂರು ಬಂದರು ಸಂಪರ್ಕ ಯೋಜನೆಯಡಿ ₹ 181.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದರ ವೆಚ್ಚ ಭರಿಸಲು ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ 2015ರ ಡಿಸೆಂಬರ್‌ನಿಂದ ಸುಂಕ ಸಂಗ್ರಹಿಸಲಾಗುತ್ತಿದೆ. ಆ ಬಳಿಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯಲ್ಲೂ ಟೋಲ್‌ ಪ್ಲಾಜಾ ಆರಂಭವಾಗಿತ್ತು. ಹೆಜಮಾಡಿ  ಹಾಗೂ ಸುರತ್ಕಲ್‌ ಟೋಲ್‌ಗೇಟ್‌ಗಳ ನಡುವೆ 20 ಕಿ.ಮೀ ಅಂತರವೂ ಇಲ್ಲ. 20 ಕಿ.ಮೀ ಪ್ರಯಾಣಿಸುವಷ್ಟರಲ್ಲಿ ವಾಹನಗಳು ಎರಡು ಟೋಲ್‌ಗಳಲ್ಲಿ ಸುಂಕ ನಿಡಬೇಕಾದ ಸ್ಥಿತಿ ಇದೆ. ಈ ಎರಡರಲ್ಲಿ ಒಂದು ಟೋಲ್‌ಗೇಟ್‌ ರದ್ದುಪಡಿಸಬೇಕು ಎಂದು ಆರು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 60 ಕಿ.ಮೀ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ. ಇದ್ದರೆ, ಅವುಗಳನ್ನು ಮೂರು ತಿಂಗಳುಗಳ ಒಳಗೆ ತೆರವುಗೊಳಿಸುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಂಸತ್ತಿನಲ್ಲಿ ಮಾ.23ರಂದು ಭರವಸೆ ನೀಡಿದ್ದರು. ಈ ಗಡುವು ಮುಗಿದ ಬಳಿಕವೂ ಸುರತ್ಕಲ್‌ ಟೋಲ್‌ ಗೇಟ್‌ ತೆರವಾಗಿಲ್ಲ. 

ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೆ.13ರಂದು ಟೋಲ್‌ಗೇಟ್‌ ಬಳಿಸಾರ್ವಜನಿಕರು  ಪ್ರತಿಭಟನೆ ನಡೆಸಿದ್ದರು. ‘ಟೋಲ್‌ಗೇಟ್‌ ಅನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತೆರವುಗೊಳಿಸದೇ ಹೋದರೆ, ಅ.18ರಂದು ವಿವಿಧ ಸಂಘಟನೆಗಳ ಸಾವಿರಾರು ಜನರು ಸೇರಿ ನೇರ ಕಾರ್ಯಾಚರಣೆ ನಡೆಸಿ ತೆರವುಗೊಳಿಸುತ್ತೇವೆ’ ಎಂದು ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಅವರು ಈ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು. ಎನ್‌ಎಚ್‌ಎಐ ಅಧಿಕಾರಿಗಳೇ ಪ್ರತಿಭಟನಾ ಸಭೆಗೆ ತೆರಳಿ ಮನವಿ ಸ್ವೀಕರಿಸಿದ್ದರು. 

‘ಸುರತ್ಕಲ್‌ ಟೋಲ್‌ ಗೇಟ್‌ ತಿಂಗಳೊಳಗೆ ರದ್ದಾಗಲಿದೆ’ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಆ. 23ರಂದು ನಡೆದಿದ್ದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಭರವಸೆ ನೀಡಿದ್ದರು.  

ಈ ಬೆಳವಣಿಗೆಗಳ ಬಳಿಕ ಸಂಸದ ನಳಿನ್‌ ಕುಮಾರ್‌ ಕಟೀಲ್‌, ‘ಸುರತ್ಕಲ್‌ ಹಾಗೂ ತಲಪಾಡಿಯ ಟೋಲ್ ಪ್ಲಾಜಾಗಳನ್ನು ವಿಲೀನಗೊಳಿಸಲಾಗುತ್ತದೆ. 28 ದಿನಗಳಲ್ಲಿ ಟೋಲ್‌ ಗೇಟ್‌ ರದ್ದಾಗಲಿದೆ’ ಎಂದು ಭರವಸೆ ನೀಡಿದ್ದರು. ಆ ಗಡುವು ಮುಗಿದರೂ ಟೋಲ್‌ ಸಂಗ್ರಹ ಮಾತ್ರ ಯಥಾವತ್ತಾಗಿ ಮುಂದುವರಿದಿದೆ.

ನೋಟಿಸ್‌ಗೆ ಕಿಮ್ಮತ್ತು ನೀಡದ ಪ್ರತಿಭಟನಾಕಾರರು
ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರ ಜೊತೆ ಉಪವಿಭಾಗಾಧಿಕಾರಿಯವರು ಶುಕ್ರವಾರ ಮಾತುಕತೆ ನಡೆಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಇದಕ್ಕೆ ಪಸಮಿತಿಯವರು ಒಪ್ಪಿರಲಿಲ್ಲ. ಹೋರಾಟದಲ್ಲಿ ಸಕ್ರಿಯವಾಗಿದ್ದ 100ಕ್ಕೂ ಅಧಿಕ ಮಂದಿಗೆ  ಸುರತ್ಕಲ್‌ ಠಾಣೆಗೆ ಪೊಲೀಸರು ಭಾರತೀಯ ದಂಡ ಸಹಿತೆ ಪ್ರಕ್ರಿಯೆ ಸೆಕ್ಷನ್ 107ರ ಪ್ರಕಾರ  ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದರು. ಈ ನೋಟಿಸ್‌ಗೆ ಕಿಮ್ಮತ್ತು ನೀಡದ ಹೋರಾಟಗಾರರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವ್ಯಕ್ತಿಯೊಬ್ಬರ ಕಣ್ಣಿಗೆ ಗಾಯ
ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಅಬ್ದುಲ್ ಖಾದರ್‌ ಎಂಬವರ ಕಣ್ಣಿಗೆ ಗಾಯವಾಗಿದೆ. ಅವರನ್ನು ಸುರತ್ಕಲ್‌ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಕೀಲ ದಿನೇಶ ಹೆಗ್ಡೆ ಉಳೆಪಾಡಿ ತಿಳಿಸಿದರು. ಇನ್ನೊಬ್ಬರ ಭುಜಕ್ಕೆ ಗಾಯವಾಗಿದೆ.

ಪ್ರತಿಭಟನಾಕಾರರು ಹೊತ್ತಯ್ದ ಪೊಲೀಸರು
ಸ್ವಯಂ ಬಂಧನಕ್ಕೆ ಒಳಗಾಗಲು ಪ್ರತಿಭಟನಾಕಾರರು ಒಪ್ಪಲಿಲ್ಲ. ನಾಲ್ಕೈದು ಮಂದಿ ಪೊಲೀಸ್‌ ಸಿಬ್ಬಂದಿ ಸೇರಿ ಅವರನ್ನು ಎತ್ತಿಕೊಂಡು ಹೋದರು. ಕಾಂಗ್ರೆಸ್‌ ಮುಖಂಡರಾದ ಪ್ರತಿಭಾ ಕುಳಾಯಿ ಅವರನ್ನೂ  ಎತ್ತಿಕೊಂಡು ಹೋಗಿ ಪೊಲೀಸ್ ವಾಹನದೊಳಕ್ಕೆ ತಳ್ಳಿದರು. ಅವರು ಕಿರುಚಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.

ರಸ್ತೆಯಲ್ಲೇ ಮಲಗಿದ ಹೋರಾಟಗಾರರು
ಕೆಲವು ಪ್ರತಿಭಟನಾಕರರು ರಸ್ತೆಲ್ಲೇ ಮಲಗಿ ಪ್ರತಿರೋಧ ತೋರಿದರು. ಪೊಲೀಸರು ಬಲವಂತದಿಂದ  ಬಂಧಿಸಿದಾಗ ಕೆಲವು ಹೋರಾಟಗಾರರ ಅಂಗಿಗಳು ಹರಿದು ಹೋದವು..

ಮುಗಿಲುಮುಟ್ಟಿದ ಘೋಷಣೆ
ಪ್ರತಿಭಟನಾಕಾರರು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ‘ಅಕ್ರಮ ಟೋಲ್‌ ಗೇಟ್‌ ಬೇಡವೇ ಬೇಡ... ಸುರತ್ಕಲ್‌ ಟೋಲ್‌ಗೇಟ್‌ ತೊಲಗಲೇ ಬೇಕು... ಅಕ್ರಮ ಲೂಟಿ ತಡೆಯಲಗದ ಶಾಸಕ ಸಂಸದರು ಬೇಕಾಗಿಲ್ಲ...‘ ಎಂದು ಏಕಸ್ವರದಲ್ಲಿ ಕೂಗಿ ಹೇಳಿದರು. ‘ಹಲೋ ಮಿಸ್ಟರ್‌ ನಳಿನ್‌ ಕುಮಾರ್‌, ಹಲೋ ಮಿಸ್ಟರ್‌ ಭರತ್‌ ಶೆಟ್ಟಿ... ಕಣ್ಣುಗಳೆರಡು ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು. 

‘ಪೊಲೀಸ್‌ ಕೇಸ್‌ಗೆ ಹೆದರುವುದಿಲ್ಲ. ಲಾಠಿ ಬೂಟುಗಳೇನೇ ಇರಲಿ, ಹೋರಾಟ ಎಂದೂ ನಿಲ್ಲದೂ ನೋಡಿ’ ಎಂದು ಸಾರಿದರು.

ಸುಂಕ ಸಂಗ್ರಹ ಮತ್ತೆ ಆರಂಭ
ಪ್ರತಿಭಟನೆ ಇದ್ದುದರಿಂದ ಮಂಗಳವಾರ ಬೆಳಿಗ್ಗೆ ಕೆಲ ಹೊತ್ತು ಸುರತ್ಕಲ್ ಟೋಲ್‌ಗಲ್ಲಿ ವಾಹನಗಳಿಂದ ಸುಂಕ ಪಡೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನಾಕಾರರ ಬಂಧನವಾದ ಅರ್ಧ ಗಂಟೆಯಲ್ಲೊ ಸುಂಕ ಸಂಗ್ರಹ ಮತ್ತೆ ಆರಂಭವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು