ಮಂಗಳೂರು: ನಗರದ ಹೊರವಲಯದ ಪಡೀಲ್ ಅಳಪೆ ಪಡ್ಪುವಿನಲ್ಲಿ ಮಳೆ ನೀರು ತುಂಬಿದ್ದ ವಿಶಾಲವಾದ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಭಾನುವಾರ ಮೃತಪಟ್ಟಿದ್ದಾರೆ.
ಮೃತರನ್ನು ಎಕ್ಕೂರು ನಿವಾಸಿ ಶೇಖರ್ ಅವರ ಪುತ್ರ ವಿಕ್ಷಿತ್ (28) ಹಾಗೂ ಅಳಪೆ ಪಡ್ಪು ರೆಂಜ ನಿವಾಸಿ ವಿಜಯ್ ಅವರ ಪುತ್ರ ವರುಣ್ (26) ಎಂದು ಗುರುತಿಸಲಾಗಿದೆ.
ವರುಣ್ ವೃತ್ತಿಯಲ್ಲಿ ಚಾಲಕರಾಗಿದ್ದರು. ವಿಕ್ಷಿತ್
ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು.
ವೀಕ್ಷಿತ್‌ಗೆ ತಂದೆ-ತಾಯಿ ಹಾಗೂ ಒಬ್ಬ ಸಹೋದರ ಇದ್ದಾರೆ. ವರುಣ್ ಗೆ ತಂದೆ-ತಾಯಿ ಹಾಗೂ ತಮ್ಮ ಇದ್ದಾನೆ. ಇಬ್ಬರೂ ಯುವಕರು ಮನೆಗೆ ಆಧಾರವಾಗಿದ್ದರು. ಅವರ ಅಗಲುವಿಕೆ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ನೀಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಆರು ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಉಳಿದವರು ಕ್ರಿಕೆಟ್ ಆಡುತ್ತಿದ್ದಾಗ ವರುಣ್ ಮತ್ತು ವಿಕ್ಷಿತ್ ರೈಲು ಹಳಿ ಪಕ್ಕದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಪಕ್ಕದಲ್ಲೇ ಕುಳಿತಿದ್ದರು. ವರುಣ್ ಆಯತಪ್ಪಿ ನೀರಿಗೆ ಬಿದ್ದರು. ಇದನ್ನು ನೋಡಿದ ತಕ್ಷಣವೇ ವಿಕ್ಷಿತ್ ಹೊಂಡಕ್ಕೆ ಧುಮಿಕಿ ಅವರನ್ನು ರಕ್ಷಿಸಲು ಯತ್ನಿಸಿದ್ದರು. ಹೊಂಡದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಲ್ಲೇ ಇದ್ದ ಗೆಳೆಯರು ಹಾಗೂ ಸ್ಥಳೀಯರು ಅವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ರಾತ್ರಿ ವೇಳೆ ಹೊಂಡದಿಂದ ಹೊರಗೆ ತೆಗೆದರು.
‘ಯುವಕರ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಕಂಕನಾಡಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೀಕ್ಷಿತ್