ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ರಿಕ್ಷಾದಲ್ಲಿ ಸ್ಫೋಟ ಪ್ರಕರಣ: ಕುಕ್ಕರ್‌ ಬಾಂಬ್‌ಗೆ ಐಎಸ್‌ ಪ್ರಭಾವ

ಮೊಹಮ್ಮದ್‌ ಶಾರಿಕ್‌ ಆರೋಪಿ
Last Updated 21 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಮಂಗಳೂರು: ರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಮೊಹಮ್ಮದ್‌ ಶಾರಿಕ್‌ (24), ನಿಷೇಧಿತ‌ ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಉಗ್ರಗಾಮಿ ಸಂಘಟನೆಯಿಂದ ಪ್ರಭಾವಿತನಾಗಿದ್ದ. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಲು ಸಿದ್ಧತೆ ನಡೆಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಇದರ ಜಾಲ ರಾಜ್ಯದ ವಿವಿಧೆಡೆಯೂ ವಿಸ್ತರಿಸಿದ್ದು, ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಐಎ ತಂಡವೂ ತನಿಖೆ ಚುರುಕುಗೊಳಿಸಿದೆ.

‘ಮೈಸೂರು, ತಿ.ನರಸಿಪುರ, ಮಂಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಈ ವರೆಗೆ ಏಳು ಕಡೆ ಶೋಧ ನಡೆಸಿದ್ದೇವೆ. ಒಬ್ಬನನ್ನು ಮಂಗಳೂರಿನಲ್ಲಿ, ಇಬ್ಬರನ್ನು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದೇವೆ. ಇನ್ನೊಬ್ಬನನ್ನು ಊಟಿಯಲ್ಲಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಾಗುತ್ತಿದೆ. ಕೆಲವೊಂದು ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಅಲೋಕ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.

‘ಪತ್ತೆ ಕಾರ್ಯಾಚರಣೆ ನಡೆಸಲು ಎರಡು ತಂಡ, ಮಾಹಿತಿ ಕಲೆ ಹಾಕಲು, ತನಿಖೆ ನಡೆಸಲು ಹಾಗೂ ಒಂದು ತಂಡಕರೆಗಳ ವಿಶ್ಲೇಷಣೆ ನಡೆಸಲು ಮತ್ತು ವಿಧಿವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕ್ರೋಡೀಕರಣಕ್ಕೆ ಡಿಜಿಟಲ್‌ ತಜ್ಞರ ತಂಡಸೇರಿ ಐದು ತಂಡಗಳು ಈ ಪ್ರಕರಣ ಭೇದಿಸಲು ಕೆಲಸ ಮಾಡುತ್ತಿವೆ’ ಎಂದರು.

‘ಶಾರಿಕ್‌, ಮಾಝ್‌ ಮುನೀರ್‌ ಅಹಮದ್‌ ಹಾಗೂಸೈಯದ್ ಯಾಸೀನ್‌ಅವರ ತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಯ ಚಟುವಟಿಕೆಗಳಿಂದ ಪ್ರಭಾವಿತರಾಗಿ ಬಾಂಬ್‌ ಸ್ಪೋಟಕ್ಕೆ ಸಂಚು ರೂಪಿಸಿತ್ತು’ ಎಂದು ಹೇಳಿದರು.

ಆರೋಪಿ ಐಎಸ್‌ ಜೊತೆ ನೇರ ಸಂಪರ್ಕ ಹೊಂದಿದ್ದನೇ ಎಂಬ ಪ್ರಶ್ನೆಗೆ, ‘ಜಾಗತಿಕ ಮಟ್ಟದಲ್ಲಿ ಸಕ್ರಿಯ
ವಾಗಿದ್ದ ಸಂಘಟನೆಯಿಂದ ಪ್ರಭಾವಿ ತರಾಗಿ ಭಯೊತ್ಪಾದನಾ ಕೃತ್ಯದಲ್ಲಿ ತೊಡಗಿದ್ದ ಎಂದಷ್ಟೇ ಸದ್ಯಕ್ಕೆ ಹೇಳಬಹುದು’ ಎಂದರು.

ಗೋಡೆಬರೆಹ ಪ್ರಕರಣದ ಜೊತೆ ನಂಟು: ಮಂಗಳೂರು ನಗರದಲ್ಲಿ 2020ರ ನವೆಂಬರ್‌ನಲ್ಲಿ ಲಷ್ಕರ್‌ ಎ ತಯ್ಯಬಾ ಹಾಗೂ ತಾಲಿಬಾನ್‌ ಪರವಾಗಿ ಗೋಡೆ ಬರಹ ಪ್ರಕರಣದಲ್ಲೂ ಶಾರಿಕ್‌ ಮುಖ್ಯ ಆರೋಪಿಯಾಗಿದ್ದ. ಆಗ ಶಾರಿಕ್ ಹಾಗೂ ಮಾಜ್‌ ಮುನೀರ್‌ ಅಹಮದ್‌ನನ್ನು ನಗರದ ಪೊಲಿಸರು ಬಂಧಿಸಿದ್ದರು. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಬ್ದುಲ್‌ ಮತೀನ್‌ ಹಾಗೂ ಅರಾಫತ್‌ ಆಲಿ ತಲೆಮರೆಸಿಕೊಂಡಿದ್ದರು.

‘ಶಾರಿಕ್‌, ಮಾಜ್‌ ಮುನೀರ್‌ ಅಹಮದ್‌, ಸೈಯದ್‌ ಯಾಸಿನ್‌ (ಶಿವಮೊಗ್ಗ ಪ್ರಕರಣದ ಆರೋಪಿ) ಅವರ ತಂಡವು ಈ ಉಗ್ರಗಾಮಿ ಸಂಘಟನೆಯಿಂದ ಪ್ರೇರಣೆಗೊಂಡು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿತ್ತು. ಗೋಡೆಬರಹ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ತೀರ್ಥಹಳ್ಳಿಯ ಅರಾಫತ್‌ ಅಲಿ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನ ಜೊತೆಗೆ ಇವರು ಸಂಪರ್ಕ ಹೊಂದಿದ್ದರು. ಶಾರಿಕ್‌ ನೇರವಾಗಿ ಅರಾಫತ್‌ ಕೈಕೆಳಗೆ ಕೆಲಸ ಮಾಡುತ್ತಿದ್ದ. ಅರಾಫತ್‌ಗೂ ತಮಿಳುನಾಡಿನಲ್ಲಿ ಹಿಂದೂ ನಾಯಕದ ಹತ್ಯೆ ಸಂಬಂಧ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ 2020ರಲ್ಲಿ ದಾಖಲಾದ ಪ್ರಕರಣದ ಆರೋಪಿ ಅಬ್ದುಲ್‌ ಮತೀತ್‌ ತಾಹ ಎಂಬಾತನಿಗೂ ನಂಟು ಇದೆ. ಅಬ್ದುಲ್‌ ಮತೀನ್‌ ತಾಹ ವಿರುದ್ಧವೂ ಕಾನೂನುಬಾಹೀರ ಚಟುವಟಿಕೆ ತಡೆ (ಯುಎಪಿ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಅಬ್ದುಲ್‌ ಮತೀನ್‌ ತಾಹ ಮಾರ್ಗದರ್ಶನದಂತೆ ಈ ತಂಡ ಕೆಲಸ ಮಾಡುತ್ತಿದೆ. ಎರಡು ವರ್ಷಗಳಿಂದ ತಲೆಮರೆಸಿಕೊಂಡಿರುವ ಆತನ ಪತ್ತೆಗೆ ನೆರವಾಗುವವರಿಗೆಎನ್‌ಐಎ ಬಹುಮಾನವನ್ನೂ ಘೋಷಿಸಿದೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು. ‌

‘ಭಯೋತ್ಪಾದನಾ ಚಟುವಟಿಕೆ ನಡೆಸಲು ಹಣಕಾಸಿನ ನೆರವನ್ನು ಯಾರು ಪೂರೈಸುತ್ತಿದ್ದಾರೆ. ಅವರಿಗೆ ಆಶ್ರಯ ನೀಡುತ್ತಿರುವವರು ಯಾರು ಎಂಬುದನ್ನು ಪತ್ತೆಹಚ್ಚುವುದಕ್ಕೆ ತನಿಖೆ ವೇಳೆ ಹೆಚ್ಚಿನ ಗಮನ ಹರಿಸುತ್ತೇವೆ. ಆರೋಪಿಗಳಿಗೆ ಉದ್ದೇಶಪೂರ್ವಕ
ವಾಗಿ ಯಾರಾದರೂ ಆಶ್ರಯ ನೀಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದರು.

ಸ್ಫೋಟ: ಆರೋಪಿ ಮಾಹಿತಿ ಸಂಗ್ರಹ

ಬೆಂಗಳೂರು: ‘ಮಂಗಳೂರಿನಲ್ಲಿ ಸಂಭವಿಸಿದ ಪ್ರೆಷರ್‌ ಕುಕ್ಕರ್‌ ಸ್ಫೋಟದ ಪ್ರಮುಖ ಆರೋಪಿಯ ವೈಯಕ್ತಿಕ ಮಾಹಿತಿಗಳನ್ನು ಪೊಲೀಸರು ಪಡೆದಿದ್ದು, ತನಿಖೆ ಚುರುಕುಗೊಂಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸಂಪರ್ಕ ಯಾವ ಊರುಗಳಲ್ಲಿದೆ ಎಂಬುದರ ಮಾಹಿತಿಯೂ ಲಭಿಸಿದೆ. ಆತನ ನಿಜವಾದ ಹೆಸರು ಹಾಗೂ ಗುರುತು ಪತ್ತೆಯಾದ ನಂತರ, ಆತ ಬೇರೆ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಆ ಜಾಡನ್ನು ಹಿಡಿದು ತನಿಖೆ ನಡೆಯುತ್ತಿದೆ’ ಎಂದರು.

‘ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಕುಟುಂಬ ವರ್ಗದವರು ಆತನನ್ನು ಗುರುತಿಸಿರುವುದು ಪ್ರಮುಖ ಬೆಳವಣಿಗೆ. ಇಲ್ಲಿಯವರೆಗಿನ ಎಲ್ಲ ಮಾಹಿತಿಗಳನ್ನೂ ರಾಷ್ಟ್ರಿಯ ತನಿಖಾ ದಳ ಮತ್ತು ಐಬಿಗೆ ನೀಡಲಾಗಿದೆ. ಇದೇ ರೀತಿಯ ಕೃತ್ಯಗಳು ಬೇರೆ ಕಡೆಯೂ ಮಾಡಿದ್ದಾರೆಯೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು. ‘ಎಲ್ಲ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೊಲೀಸರು, ಭಯೋತ್ಪಾದಕ ನಿಗ್ರಹ ದಳ, ಆಂತರಿಕ ಸುರಕ್ಷತಾ ವಿಭಾಗಗಳು ಸಂಯೋಜಿಸಿ ಕಾರ್ಯನಿರ್ವಹಿಸಬೇಕು. ತನಿಖೆಯನ್ನು ಚುರುಕುಗೊಳಿಸಿ, ಹಿಂದಿರುವ ಘಾತುಕ ಶಕ್ತಿಗಳನ್ನು ಬಹಿರಂಗಗೊಳಿಸಬೇಕು’ ಎಂದು ಬೊಮ್ಮಾಯಿ ಹೇಳಿದರು.

‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವಿಫಲವಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಕಾಲದಲ್ಲಿಯೂ ಇಂತಹ ಹಲವಾರು ಘಟನೆಗಳು ಸಂಭವಿಸಿವೆ. ಇದು ರಾಜಕೀಯ ಪ್ರೇರಿತ ಹೇಳಿಕೆ. ಇಂತಹ ಹೇಳಿಕೆಗಳಿಗೆ ಮಹತ್ವ ನೀಡುವುದಿಲ್ಲ’ ಎಂದರು.

ಸ್ಫೋಟ: ಬೆಂಗಳೂರಿನಲ್ಲಿದ್ದ ವ್ಯಕ್ತಿ ವಶಕ್ಕೆ

ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಮೈಸೂರಿಗೆ ಕರೆದೊಯ್ಯಲಾಗಿದೆ.

‘ಮೈಸೂರು ನಿವಾಸಿಯಾದ ವ್ಯಕ್ತಿ, ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಭಾನುವಾರ ಬಂದಿದ್ದ. ಈತನ ಬಗ್ಗೆ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದರು. ಎರಡು ಗಂಟೆ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ‍ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಭಾನುವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಮಂಗಳೂರು ಪೊಲೀಸರ ತಂಡ, ವ್ಯಕ್ತಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಮೈಸೂರಿಗೆ ಕರೆದೊಯ್ದಿದೆ. ಆತನ ಮನೆಯಲ್ಲಿ ಶೋಧ ನಡೆಸಿರುವ ಬಗ್ಗೆ ಮಾಹಿತಿ ಇದೆ’
ಎಂದು ತಿಳಿಸಿದರು.

‘ವ್ಯಕ್ತಿಯ ಹೆಸರು ಹಾಗೂ ಆತನ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲ. ಮಂಗಳೂರು ಪೊಲೀಸರ ತನಿಖೆಗೆ ಕೈ ಜೋಡಿಸಲಾಗಿದೆ. ಜೊತೆಗೆ, ವ್ಯಕ್ತಿ ಜೊತೆ ಒಡನಾಟ ಹೊಂದಿದ್ದ ಬೆಂಗಳೂರಿನ ಮೂವರನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

ಆರೋಪಿ ಜೊತೆ ನಂಟು: ‘ಮಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿರುವ ಆರೋಪಿ ಜೊತೆ ನಂಟು ಹೊಂದಿದ್ದ ಆರೋಪ ವ್ಯಕ್ತಿ ಮೇಲಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳಿಗಾಗಿ ಪೊಲೀಸರ ತಂಡ ತನಿಖೆ ಮುಂದುವರಿಸಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಆರೋಪಿ ಶಾರಿಕ್‌: ದೃಢಪಡಿಸಿದ ಪೊಲೀಸರು

‘ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ನಡೆದ ಸ್ಪೋಟದಲ್ಲಿ ಗಾಯಗೊಂಡು ನಗರದ ಫಾದರ್
ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಮೊಹಮ್ಮದ್‌ ಶಾರಿಕ್‌ ಎಂಬುದನ್ನು ಆತನ ಕುಟುಂಬದವರು ಖಚಿತ ಪಡಿಸಿದ್ದಾರೆ’ ಎಂದು ಅಲೋಕ್ ಕುಮಾರ್‌ ತಿಳಿಸಿದರು.

‘ಶಾರಿಕ್‌ ಮಲತಾಯಿ ಶಬಾನಾ, ಸೋದರಿ ಆಹಿಯಾ, ತಾಯಿಯ ತಂಗಿ ಆಸ್ಮಿನ್‌ ಅವರು ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಗುರುತಿಸಿದ್ದಾರೆ. ನಾನೂ ಅವರ ಜೊತೆ ಮಾತನಾಡಿದ್ದೇನೆ’ ಎಂದರು.

ಆರೋಪಿಗಳಿಗೆ ತೀರ್ಥಹಳ್ಳಿಯ ನಂಟು

ಭಯೋತ್ಪಾದನಾ ಕೃತ್ಯದಲ್ಲಿ ನಂಟು ಹೊಂದಿರುವ ಅರಾಫತ್‌ ಅಲಿ, ಶಾರಿಕ್‌, ಮಾಜ್‌ ಮುನೀರ್‌ ಅಹಮದ್‌, ಅಬ್ದುಲ್‌ ಮತೀನ್‌ ತಾಹ
ಎಲ್ಲರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೈಯದ್‌ ಯಾಸಿನ್‌ ಶಿವಮೊಗ್ಗದ ಸಿದ್ಧೇಶ್ವರ ನಗರದ ನಿವಾಸಿ.

ಶಿವಮೊಗ್ಗ ಗಲಾಟೆ ಬಳಿಕ ತಲೆಮರೆಸಿಕೊಂಡಿದ್ದ

‘ಶಾರಿಕ್‌ 2022ರ ಆ.18ರಂದು ಶಿವಮೊಗ್ಗದಲ್ಲಿ ಗಲಾಟೆ ಆಗಿತ್ತು. ಆ ಪ್ರಕರಣ ಆರೋಪಿ ಜಮೀವುಲ್ಲಾನನ್ನು ಸ್ಥಳೀಯ ಪೊಲೀಸರು ದಸ್ತಗಿರಿ ಮಾಡಿದ್ದರು. ಆಗಲೇ ಎಚ್ಚೆತ್ತುಕೊಂಡಿದ್ದ ಶಾರಿಕ್‌ ಅಲ್ಲಿಂದ ಕಾಲ್ಕಿತ್ತಿದ್ದ. ತಮಿಳುನಾಡಿನ ಕೊಯಮತ್ತೂರು, ಕೇರಳದ ಹಲವು ಪ್ರದೇಶಗಳಲ್ಲಿ ಸುತ್ತಾಡಿದ್ದ. ಮೈಸೂರಿಗೆ ತೆರಳಿ ಸೆ. 20ರಿಂದ ಅಲ್ಲಿ ವಾಸವಾಗಿದ್ದ. ಪ್ರೇಮರಾಜ್‌ ಎಂದು ಗುರುತು ಹೇಳಿಕೊಂಡು ಮೈಸೂರಿನ ಲೋಕನಾಯಕ ನಗರದಲ್ಲಿ ಮೋಹನ್‌ ಕುಮಾರ್ ಅವರ ಮನೆಯಲ್ಲಿ ಬಾಡಿಗೆ ಮನೆ ಪಡೆದಿದ್ದ. ಮೊಬೈಲ್‌ ದುರಸ್ತಿ ಅಂಗಡಿಯಲ್ಲಿ ಅದೇ ಗುರುತನ್ನು ತೋರಿಸಿ ಕೆಲಸಕ್ಕೆ ಸೇರಿಕೊಂಡಿದ್ದ. ತರಬೇತಿ ಸಂಸ್ಥೆಯಲ್ಲೂ ಕೆಲಸ ಮಾಡುತ್ತಿದ್ದ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಯುಎಪಿಎ ಅಡಿ ಬಂಧಿಸಿದ್ದರೂ, ಇಟ್ಟಿಲ್ಲ ನಿಗಾ

ಯುಎಪಿ ಕಾಯ್ದೆಯಡಿ ಬಂಧನಕ್ಕೊಳಗಾಗುವ ಆರೋಪಿಗಳ ಬಗ್ಗೆ ಪೊಲೀಸ್‌ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೆಚ್ಚಿನ ನಿಗಾ ಇಡುತ್ತದೆ. ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಶಾರಿಕ್‌ ನನ್ನು 2020ರಲ್ಲಿ ಯುಎಪಿ ಕಾಯ್ದೆಯಡಿ ಬಂಧಿಸಿದ್ದರೂ ಆತ ಪದೇ ಪದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆತ ನಡೆಸಿದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಸುಳಿವು ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.

‘ಸಾಮಾನ್ಯವಾಗಿ ಯುಎಪಿ ಕಾಯ್ದೆಯಡಿ ಬಂಧನಕ್ಕೊಳಗಾದವರಿಗೆ ಜಾಮೀನು ನೀಡುವಾಗ ಯಾವ ಷರತ್ತು ವಿಧಿಸಲಾಗುತ್ತದೆ ಎಂಬ ಆಧಾರದಲ್ಲಿ ಅವರ ಚಟುವಟಿಕೆ ಮೇಲೆ ನಿಗಾ ಇಡಲು ಪೊಲೀಸ್‌ ಇಲಾಖೆ ಅಥವಾ ಎನ್‌ಐಎ ಕ್ರಮ ಕೈಗೊಳ್ಳುತ್ತದೆ. ಆರೋಪಿಗೆ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತೇ ಎಂದು ಪರಿಶೀಲಿಸಬೇಕು. ಒಂದು ವೇಳೆ ಈ ರೀತಿ ಷರತ್ತು ಹಾಕಿದ್ದರ ಹೊರತಾಗಿಯೂ ಪೊಲೀಸರು ನಿಗಾ ಇಟ್ಟಿಲ್ಲವಾದರೆ ಅದನ್ನು ಲೋಪ ಎಂದೇ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಕಾರಣವಾದ ಪೊಲಿಸರು ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT