ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ದತ್ತಮಾಲಾ ಅಭಿಯಾನಕ್ಕೆ ಜಿಲ್ಲೆಯಿಂದ 2 ಸಾವಿರ ಜನ: ಆನಂದ್‌ ಶೆಟ್ಟಿ

Published 27 ಅಕ್ಟೋಬರ್ 2023, 3:08 IST
Last Updated 27 ಅಕ್ಟೋಬರ್ 2023, 3:08 IST
ಅಕ್ಷರ ಗಾತ್ರ

ಮಂಗಳೂರು: ‘ಶ್ರೀರಾಮ ಸೇನೆ ವತಿಯಿಂದ ಚಿಕ್ಕಮಗಳೂರಿನ ಗುರು ದತ್ತಾತ್ರೇಯರ ಪವಿತ್ರ ಭೂಮಿ ದತ್ತಪೀಠವನ್ನು ಇಸ್ಲಾಮಿಕ್‌ ಆಕ್ರಮಣದಿಂದ ಮುಕ್ತಗೊಳಿಸಲು ಅ.30ರಿಂದ ನ.5ರವರೆಗೆ ರಾಜ್ಯಾದ್ಯಂತ ದತ್ತಮಾಲಾ ಅಭಿಯಾನ, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ ಅಡ್ಯಾರ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.30ರಂದು ದತ್ತಮಾಲೆ ಧಾರಣೆ, ನ.2ರಂದು ದತ್ತ ದೀಪೋತ್ಸವ, 4ರಂದು ಪಡಿ ಸಂಗ್ರಹ, 5ರಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಧರ್ಮಸಭೆ, ದತ್ತಪೀಠದಲ್ಲಿ ಬೆಳಿಗ್ಗೆ 11ಕ್ಕೆ ಪಾದುಕೆ ದರ್ಶನ, ಹೋಮ, ಪ್ರಸಾದ ವಿತರಣೆ ನಡೆಯಲಿದೆ. ರಾಜ್ಯದಿಂದ 10 ಸಾವಿರ ಮಂದಿ ಭಾಗವಹಿಸಲಿದ್ದಾರೆ’ ಎಂದರು.

‘ನ.2ರಂದು ಪಿವಿಎಸ್‌ನ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ದತ್ತದೀಪೋತ್ಸವ ನಡೆಯಲಿದೆ. ಜಿಲ್ಲೆಯಿಂದ 2 ಸಾವಿರ ಮಂದಿ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಂಗಳೂರು ಆಸುಪಾಸಿನವರು ಕದ್ರಿ ಮೈದಾನದಲ್ಲಿ 4ರಂದು ಒಗ್ಗೂಡಿ ರಾತ್ರಿ 9ಕ್ಕೆ ಚಿಕ್ಕಮಗಳೂರಿಗೆ ತೆರಳಲಿದ್ದೇವೆ. 5ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ರಾಷ್ಟ್ರೀಯ ಗೌರವಾಧ್ಯಕ್ಷ, ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನಂನ ಯೋಗಿ ಸಂಜೀತ್‌ ಸುವರ್ಣ, ಅರ್ಚಕ ರಾಜೇಂದ್ರ ಕುಮಾರ್‌ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ದತ್ತಪೀಠದಲ್ಲಿರುವ ಅಕ್ರಮ, ಅನಧಿಕೃತ ಗೋರಿಗಳು ಸರ್ಕಾರಿ ದಾಖಲೆಗಳ ಪ್ರಕಾರ ಅಲ್ಲಿಂದ 14 ಕಿ.ಮೀ. ದೂರದ ನಾಗೇನಹಳ್ಳಿ ಬಾಬಾಬುಡನ್‌ ದರ್ಗಾಕ್ಕೆ ಸ್ಥಳಾಂತರಗೊಳ್ಳಬೇಕು. ದತ್ತಪೀಠವನ್ನು ಹಿಂದೂ ಪೀಠ ಎಂದು ಘೋಷಣೆ ಮಾಡಬೇಕು. ಮುಜರಾಯಿ ಇಲಾಖೆ ಅಧಿನದಲ್ಲಿ ಪೀಠ ಇರುವುದರಿಂದ ಅಲ್ಲಿ ನಡೆಯುವ ಉರುಸ್‌ ನಿಲ್ಲಿಸಬೇಕು. ಬರುವ ಭಕ್ತರಿಗೆ ನಿತ್ಯಪ್ರಸಾದ, ಯಾತ್ರಿ ನಿವಾಸ ವ್ಯವಸ್ಥೆ, ಉಪನಯನ, ಹೋಮ  ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು. ಸಾಧು ಸಂತರಿಗೆ ದರ್ಶನಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷ ಮಧುಸೂದನ್‌, ಜಿಲ್ಲಾ ಕಾರ್ಯಾಧ್ಯಕ್ಷ ಅರುಣ್‌ ಕದ್ರಿ, ಜಿಲ್ಲಾ ವಕ್ತಾರ ಯೋಗೀಶ್‌ ಪರಂಗಿಪೇಟೆ, ಸುರತ್ಕಲ್‌ ಪ್ರಖಂಡ ಅಧ್ಯಕ್ಷ ನವೀನ್‌ ಕೋಡಿಕಲ್‌, ನಗರಾಧ್ಯಕ್ಷ ಜಯೇಶ್‌ ಸಚ್ಚು, ನಗರ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT