ಗುರುವಾರ , ಮಾರ್ಚ್ 23, 2023
30 °C
ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾದ ಮಾಲ್‌ಗಳು

ಧಾರ್ಮಿಕ ನೆಲೆ: ಭಕ್ತರಿಗೆ ಪ್ರವೇಶ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಎರಡು ತಿಂಗಳುಗಳ ನಂತರ ಇಂದಿನಿಂದ(ಜುಲೈ 5) ಜಿಲ್ಲೆಯ ದೇವಾಲಯಗಳು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿವೆ. ನಗರದ ಮಾಲ್‌ಗಳು ಸಹ ಇಂದಿನಿಂದ ಬಾಗಿಲು ತೆರೆಯಲಿವೆ.

ಕೋವಿಡ್–19 ಎರಡನೇ ಅಲೆ ತೀವ್ರತೆ ಕಡಿಮೆಯಾದ ಕಾರಣ ಸರ್ಕಾರ ಅನ್‌ಲಾಕ್‌ –3ಯಲ್ಲಿ ದೇವಾಲಯ, ಧಾರ್ಮಿಕ ಸ್ಥಳಗಳು, ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಸರ್ಕಾರದ ಆದೇಶ ಘೋಷಣೆಯಾದ ಬೆನ್ನಲ್ಲೇ ದೇವಾಲಯಗಳಲ್ಲಿ ಸಿದ್ಧತೆಗಳು ನಡೆದಿವೆ. ದೇವಾಲಯಗಳ ಆವರಣ ಸ್ವಚ್ಛಗೊಳಿಸುವ, ಸ್ಯಾನಿಟೈಸ್ ಮಾಡುವ ಕಾರ್ಯ ಭಾನುವಾರ ಭರದಿಂದ ನಡೆಯಿತು.

ಜಿಲ್ಲೆಯ ಪ್ರಮುಖ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳು, ನಗರದ ಕುದ್ರೋಳಿ ಗೋಕರ್ಣನಾಥೇಶ್ವರ, ಕದ್ರಿ ದೇವಾಲಯಗಳಲ್ಲಿ ಆವರಣವನ್ನು ಸ್ವಚ್ಛಗೊಳಿಸಿ, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಒದಗಿಸಲಾಗಿದ್ದು, ಸೇವೆಗಳಿಗೆ ಅವಕಾಶ ಇಲ್ಲ. ಮಸೀದಿಗಳಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಮಸೀದಿಗಳಲ್ಲಿ ನಮಾಝ್ ನಡೆಸಲು ನಿರ್ಧರಿಸಲಾಗಿದೆ.

ನಗರದ ಫೋರಮ್‌ ಮಾಲ್, ಸಿಟಿ ಸೆಂಟರ್‌, ಬಿಗ್‌ ಬಜಾರ್‌ಗಳಲ್ಲಿ ಭಾನುವಾರ ಕೆಲಸಗಾರರು ಸ್ವಚ್ಛತಾ ಕಾರ್ಯ ನಡೆಸಿದರು. ಮಾಲ್‌ಗಳ ಹೊರ ಆವರಣದಲ್ಲಿ ತೊಳೆದು ಸ್ವಚ್ಛಗೊಳಿಸಲಾಯಿತು.

ರಾತ್ರಿ 9ರವರೆಗೆ ಖಾಸಗಿ ಬಸ್ ಸಂಚಾರ: ‘ರಾಜ್ಯ ಸರ್ಕಾರದ ಪರಿಷ್ಕೃತ ಆದೇಶವು ರಾತ್ರಿ 9 ಗಂಟೆವರೆಗೆ ಬಸ್‌ ಸಂಚಾರಕ್ಕೆ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯವರೆಗೆ ಖಾಸಗಿ ಬಸ್‌ಗಳು ಸಂಚರಿಸಲಿವೆ. ಕೊನೆಯ ಟ್ರಿಪ್‌ ಅನ್ನು ಕಡಿತಗೊಳಿಸಲು ಯೋಚಿಸಲಾಗಿದೆ. ಸೋಮವಾರ ಸುಮಾರು 100 ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆಗಳಿವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರತಿಕ್ರಿಯಿಸಿದರು.

‘ಅಗತ್ಯಕ್ಕೆ ಅನುಗುಣವಾಗಿ ಬಸ್’

ಶಾಲೆ–ಕಾಲೇಜುಗಳು ಆರಂಭವಾಗದ ಕಾರಣ ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ಇರುವಷ್ಟೇ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಪ್ರಸ್ತುತ 250ರಷ್ಟು ಮಾರ್ಗಗಳಲ್ಲಿ ಬಸ್‌ ಸಂಚರಿಸುತ್ತಿದೆ. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ ಬಿಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದರು.

ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಈಗಾಗಲೇ ಬೆಂಗಳೂರಿಗೆ ರಾತ್ರಿ ಬಸ್ ಸಂಚಾರ ಆರಂಭಗೊಂಡಿದೆ. ಭಾನುವಾರ ಕೂಡ ಬೆಂಗಳೂರಿಗೆ ಬಸ್‌ಗಳು ತೆರಳಿವೆ. ಆದರೆ, ಮೈಸೂರು, ಮಂಡ್ಯ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ಅನುಮತಿ ದೊರೆತಿಲ್ಲ. ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಕಾರಣ ಮಡಿಕೇರಿ ಮಾರ್ಗವಾಗಿ ಹೋಗುವ ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ರಾತ್ರಿ ನೇರ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಕೆಎಸ್‌ಆರ್‌ಟಿಸಿ ಘಟಕಗಳು ವಿನಂತಿಸಿವೆ.

ನಿಯಮ ಪಾಲನೆ: ನಮಾಝ್‌ಗೆ ಅವಕಾಶ

ಸೋಮವಾರದಿಂದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಮಾಡಲು ಅವಕಾಶ ನೀಡಲಾಗಿದೆ. ನಮಾಜ್‌ಗೆ ಬರುವವರು ಮನೆಯಲ್ಲೇ ವಝು (ಅಂಗಶುದ್ಧಿ) ಮಾಡಿ ಬರಬೇಕು. ಮನೆಯಿಂದಲೇ ನೆಲಕ್ಕೆ ಹಾಸುವ ಬಟ್ಟೆ ತರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‍ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದು ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು