ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಮಳೆ ಬರದಿದ್ದರೆ ಎಎಂಆರ್‌ನಿಂದ ನೀರು: ಮೇಯರ್

ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆ
Last Updated 25 ಮಾರ್ಚ್ 2023, 6:10 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಒಂದೊಮ್ಮೆ ನೀರಿನ ಮಟ್ಟ ನಾಲ್ಕು ಮೀಟರ್‌ಗೆ ಇಳಿಕೆಯಾದರೆ ಎಎಂಆರ್ ಅಣೆಕಟ್ಟೆಯಿಂದ ತುಂಬೆ ಅಣೆಕಟ್ಟೆಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ ತುಂಬೆಯಲ್ಲಿ ನೀರಿನ ಮಟ್ಟ 4.69 ಮೀಟರ್‌ಗೆ ಇಳಿಕೆಯಾಗಿತ್ತು. ಮಳೆ ಬರದಿದ್ದರೆ ಇನ್ನಷ್ಟು ಇಳಿಕೆಯಾಗುವ ಸಂಭವ ಇದೆ. ಹೀಗಾಗಿ, ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಲಾಗಿದೆ. ಶಂಭೂರಿನ ಎಎಂಆರ್‌ ಅಣೆಕಟ್ಟೆಯಿಂದ ನೀರು ತಂದರೆ ಮುಂದಿನ 45 ದಿನಗಳವರೆಗೆ ನೀರಿನ ಸಮಸ್ಯೆ ಆಗದೆಂದು ಅಂದಾಜಿಸಲಾಗಿದೆ. ಆದರೆ, ಏಪ್ರಿಲ್ ಅಂತ್ಯದವರೆಗೆ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸುವ ವಿಚಾರ ಇಲ್ಲ’ ಎಂದರು.

11 ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಮುಷ್ಕರದಿಂದಾಗಿ ಒಳಚರಂಡಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಸೋಮವಾರದ ಒಳಗೆ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.

ನಗರದ ಕೆಲವು ಕಡೆಯಲ್ಲಿ ಒಳಚರಂಡಿ ನೀರು ವೆಟ್‌ವೆಲ್‌ಗಳಿಂದ ಪಂಪ್ ಆಗದೆ ಎಸ್‌ಟಿಪಿಗಳು ಸ್ಥಗಿತಗೊಂಡಿವೆ. ಒಳಚರಂಡಿ ಜಾಲದಲ್ಲಿ ನೀರು ತುಂಬಿಕೊಂಡು ಅಲ್ಲಲ್ಲಿ ರಸ್ತೆ ಮಧ್ಯದಲ್ಲಿ ಹರಿಯುತ್ತಿರುವ ಸಮಸ್ಯೆ ಕೂಡ ಕಂಡುಬಂದಿದೆ. ಶಾಸಕರ ನೇತೃತ್ವದಲ್ಲಿ ಕಾರ್ಮಿಕರ ಮನವೊಲಿಕೆಯ ಪ್ರಯತ್ನ ನಡೆದಿದ್ದರೂ ಪ್ರಯೋಜನ ಆಗಿಲ್ಲ ಎಂದು ತಿಳಿಸಿದರು.

ನಗರದಲ್ಲಿನ ಒಳಚರಂಡಿ ವ್ಯವಸ್ಥೆಯಲ್ಲಿ ನಾಲ್ಕು ಎಸ್‌ಟಿಪಿಗಳು ಹಾಗೂ 22 ವೆಟ್‌ವಲ್‌ಗಳು ಇವೆ. ಒಳಚರಂಡಿ ಸಂಪರ್ಕ ಜಾಲವನ್ನು ದೈನಂದಿನ ನಿರ್ವಹಣೆಗಾಗಿ ಪಾಲಿಕೆಯ ವಾಹನಗಳನ್ನು ಇ ಟೆಂಡರ್ ನೀಡಿ, ಹೊರಗುತ್ತಿಗೆ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಉಪಮೇಯರ್ ಪೂರ್ಣಿಮಾ, ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕೀಲ ಕಾವ, ಹೇಮಲತಾ ಸಾಲ್ಯಾನ್, ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT