ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚ್ಚನಾಡಿ ತ್ಯಾಜ್ಯ ದುರಂತ: ₹8 ಕೋಟಿ ಬಿಡುಗಡೆ

ತಡೆಗೋಡೆ ಕಾಮಗಾರಿ ಕೂಡಲೇ ಆರಂಭಿಸಿ: ಸಚಿವ ಭೈರತಿ ಬಸವರಾಜ
Last Updated 29 ಫೆಬ್ರುವರಿ 2020, 12:55 IST
ಅಕ್ಷರ ಗಾತ್ರ

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ತ್ಯಾಜ್ಯ ಕುಸಿತದಿಂದ ಸಂಭವಿಸಿದ ದುರಂತಕ್ಕೆ ಪರಿಹಾರವಾಗಿ ಸರ್ಕಾರ ₹8 ಕೋಟಿ ಬಿಡುಗಡೆ ಮಾಡಿದ್ದು, ತಕ್ಷಣ ತುರ್ತು ಕಾಮಗಾರಿ ಹಾಗೂ ಪರಿಹಾರ ಒದಗಿಸಲು ಪಾಲಿಕೆಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ಪಚ್ಚನಾಡಿ ತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದ ಅವರು, ‘ತ್ಯಾಜ್ಯ ಕುಸಿತದಿಂದ ನಿರಾಶ್ರಿತರಾದ 27 ಕುಟುಂಬಗಳಿಗೆ ಕರ್ನಾಟಕ ವಸತಿ ಮಂಡಳಿಯ ವಸತಿ ಸಮುಚ್ಚಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ತಜ್ಞರ ತಂಡದಿಂದ ಸ್ಥಳ ಪರಿಶೀಲನೆ ನಡೆಸಿದ್ದು, ಆ ವರದಿಯಂತೆ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಸಲಾಗಿದೆ. ಪ್ರಥಮ ಹಂತವಾಗಿ ಬಿಡುಗಡೆಯಾದ ಹಣದಲ್ಲಿ ₹4 ಕೋಟಿ ಅನ್ನು ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ತಡೆಗೋಡೆ ನಿರ್ಮಾಣ ಮಾಡಲು ಹಾಗೂ ಉಳಿದ ₹4 ಕೋಟಿಯನ್ನು ನಿರಾಶ್ರಿತರ ಪರಿಹಾರ ಪಾವತಿಸಲು ಬಳಕೆ ಮಾಡಲಾಗುವುದು’ ಎಂದು ತಿಳಿಸಿದರು.

ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಈ ಬಾರಿ ಮಳೆಗಾಲದಲ್ಲಿ ಮತ್ತೆ ಯಾವುದೇ ದುರಂತ ಸಂಭವಿಸದಂತೆ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಂದಿನ ವಾರದಿಂದಲೇ ಆರಂಭಿಸಿ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಚ್ಚನಾಡಿಯಲ್ಲಿನ ಪರಿಸ್ಥಿತಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿ ಆರಂಭಿಸಲು ವಿಳಂಬವಾದ ಬಗ್ಗೆ ಪ್ರಶ್ನಿಸಿದರು.

ಪಾಲಿಕೆ ಸ್ಥಳೀಯ ಸದಸ್ಯ ಸಂಗೀತಾ ಆರ್. ನಾಯಕ್ ಮಾತನಾಡಿ, ತ್ಯಾಜ್ಯ ಘಟಕದಿಂದ ಮಂದಾರಕ್ಕೆ ಹರಿದು ಹೋಗುವ ಮಳೆ ನೀರಿಗೆ ಬದಲಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಬಸವರಾಜ, ಮಳೆಗಾಲಕ್ಕೆ ಮುಂಚಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ಭೇಟಿಯ ವೇಳೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಿರಬೇಕು ಸೂಚನೆ ನೀಡಿದರು.
ನಂತರ ಸಚಿವ ಬಸವರಾಜ ಅವರು ತ್ಯಾಜ್ಯ ಕುಸಿತದಿಂದ ತೊಂದರೆಗೆ ಒಳಗಾಗಿರುವ ಮಂದಾರಕ್ಕೂ ಭೇಟಿ ನೀಡಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಯಾರಿಗೂ ಮನೆ ಇನ್ನೂ ಮಂಜೂರು ಆಗಿಲ್ಲ. ಪ್ರಕ್ರಿಯೆಗಳು ನಡೆಯುತ್ತಿಲ್ಲ. ಯಾರಿಗೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದರು.

ತಾರತಮ್ಯ ಆಗಿರುವ ಕುರಿತಂತೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು. ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯವಾಗಿದ್ದಲ್ಲಿ ಹಾಗೂ ಪಾರಂಪರಿಂಕ ಮನೆ ಉಳಿಸಲು ಅಥವಾ ಪುನರ್ ನಿರ್ಮಾಣದ ಸಾಧ್ಯತೆ ಬಗ್ಗೆ ಪಾಲಿಕೆಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ಭರವಸೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್, ನೂತನ ಮೇಯರ್ ದಿವಾಕರ ಪಾಂಡೇಶ್ವರ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT