ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಕೆಡಿಸಲು ಕಾಂಗ್ರೆಸ್ ಪ್ರಯತ್ನ: ಕೇಂದ್ರ ಸಚಿವ ರಾಜೀವ ಚಂದ್ರಶೇಖರ್

Last Updated 18 ಆಗಸ್ಟ್ 2021, 13:45 IST
ಅಕ್ಷರ ಗಾತ್ರ

ಮಂಗಳೂರು: ‘ದೇಶ ಮೊದಲು ಎನ್ನುವುದು ಬಿಜೆಪಿಯ ಬದ್ಧತೆ. ಕಾಂಗ್ರೆಸ್‌ನವರಿಗೆ ಇಂತಹ ಯಾವುದೇ ಬದ್ಧತೆ ಇಲ್ಲ. ಭಾರತವು ವಿಶ್ವದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆದು, ದೇಶದ ಹೆಸರನ್ನು ಕೆಡಿಸುವುದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪ್ರಯತ್ನವಾಗಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದರು.

ಬಿಜೆಪಿ ಜನಾಶೀರ್ವಾದ ಯಾತ್ರೆ ಪ್ರಯುಕ್ತ ಬುಧವಾರ ಇಲ್ಲಿ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಆಡಳಿತ ನಡೆಸಿದ 60 ವರ್ಷಗಳಲ್ಲಿ ಆಗದ ಸುಧಾರಣೆ ದೇಶದಲ್ಲಿ ಏಳು ವರ್ಷಗಳಲ್ಲಿ ಆಗಿದೆ. ಕಾಂಗ್ರೆಸ್ ಭ್ರಷ್ಟಾಚಾರ ಮಾಡಿ ದೇಶವನ್ನು ಲೂಟಿ ಮಾಡಿರುವುದು ಗೊತ್ತಿರುವ ಸಂಗತಿ. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ವರದಿಯಾಗಿಲ್ಲ ಎಂದರು.

ಮೀನುಗಾರಿಕೆ ಸಚಿವ ಎಸ್.ಅಂಗಾರ ಮಾತನಾಡಿ, ‘ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕಾಗಿದೆ. ಸಂಘಟನೆ ಯಶಸ್ವಿಯಾದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಸ್ವಾಗತಿಸಿದರು. ಜನಾರ್ಶೀವಾದ ಯಾತ್ರೆಯ ಸಂಚಾಲಕ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ ವಂದಿಸಿದರು.

ಮುಖಂಡರೊಂದಿಗೆ ಸಂವಾದ: ಸಚಿವ ರಾಜೀವ ಚಂದ್ರಶೇಖರ್ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಡೆಸಿದರು. ಮುಂದಿನ 25 ವರ್ಷಗಳ ಆಡಳಿತದ ಗುರಿಯನ್ನು ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಚಿಂತನೆ ಮಾಡಲಾಗುತ್ತಿದೆ ಎಂದು ಸಂವಾದದಲ್ಲಿ ಹೇಳಿದರು.

ವಿವಿಧ ಸಮಸ್ಯೆಗಳ ಕುರಿತು ನೀಡಿದ ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ನಡೆಸಿದ ಸ್ವಚ್ಛ ಮಂಗಳೂರು ಅಭಿಯಾನದ ಮಾದರಿ ಕುರಿತು ಮಠದ ರಂಜನ್ ಮಾಹಿತಿ ನೀಡಿದರು. ದೇಶದ ಎಲ್ಲ ಕರಾವಳಿಗಳಲ್ಲಿ ಏಕರೂಪದ ಮೀನುಗಾರಿಕಾ ಋತುವಿಗೆ ಕೇಂದ್ರ ಸರ್ಕಾರ ಆದೇಶ ಮಾಡಬೇಕು. ವಾಜಪೇಯಿ ಪ್ರಧಾನಿಯಾಗಿದ್ದಾಗ ನೀಡಿದಂತೆ ಮೀನುಗಾರಿಕೆಗೆ ಸಹಾಯಧನದಲ್ಲಿ ಡೀಸೆಲ್ ನೀಡಬೇಕು ಎಂದು ಮೀನುಗಾರಿಕಾ ಮುಖಂಡ ಜಯ ಸಿ.ಕೋಟ್ಯಾನ್ ಹೇಳಿದರು.

ಮುದ್ರಾ ಯೋಜನೆ ಬಗ್ಗೆ ಕೂಲಂಕಷ ವಿಮರ್ಶೆಯಾಗಬೇಕು ಹಾಗೂ ಜನೌಷಧ ಕೇಂದ್ರಗಳಲ್ಲಿ
ಅಗತ್ಯ ಔಷಧಗಳ ಕೊರತೆ ಕುರಿತು ಗಮನ ಹರಿಸುವಂತೆ ಡಾ.ವಾಮನ ಶೆಣೈ ಗಮನ ಸೆಳೆದರು.

‘ಪ್ರತಿಪಕ್ಷವಾಗಲೂ ಯೋಗ್ಯತೆ ಇಲ್ಲ’

‘ನಮ್ಮ ಮೆರವಣಿಗೆ ಜನರ ಮನೆ ಬಾಗಿಲಿಗೆ, ಆದರೆ ಕಾಂಗ್ರೆಸ್ ಮೆರವಣಿ ಜೈಲಿಗೆ ಹಾಗೂ ಜೈಲಿನಿಂದ ಬಿಡುಗಡೆಗೊಂಡವರನ್ನು ಸ್ವಾಗತಿಸಲಿಕ್ಕೆ ಸೀಮಿತ.ಪ್ರತಿಪಕ್ಷವಾಗಿಯೂ ಕೆಲಸ ಮಾಡಲಿಕ್ಕೆ ಯೋಗ್ಯತೆ ಇಲ್ಲ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಸಾಬೀತುಪಡಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಲೇವಡಿ ಮಾಡಿದರು.

ಚುನಾವಣೆ ಬಂದಾಗ ಪಕ್ಷಗಳು ಜನರ ಬಳಿಗೆ ಹೋಗುವುದು ಸಹಜ. ಆದರೆ, ಬಿಜೆಪಿ ಯಾವುದೇ ಚುನಾವಣೆ ಇಲ್ಲದಿದ್ದರೂ, ಜನರ ಬಳಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಜನಾಶೀರ್ವಾದ ಪಡೆಯುತ್ತಿದೆ’ ಎಂದರು.

‘ಉತ್ತರಾಧಿಕಾರಿ ಯಾರು’

‘ಈಗ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಅವರಿಗೆ 2025ರ ವೇಳೆಗೆ 75 ವರ್ಷ ದಾಟುತ್ತದೆ. ನಂತರ ಅವರ ಸಮರ್ಥ ಉತ್ತರಾಧಿಕಾರಿ ಯಾರು? ದೇಶಕ್ಕೆ ಇನ್ನು ಎರಡು ಅವಧಿಗೆ ಬಿಜೆಪಿ ಸರ್ಕಾರವೇ ಇರಬೇಕು’ ಎಂದು ಪ್ರಶ್ನಿಸಿ ಅಚ್ಚರಿ ಮೂಡಿಸಿದರು ರಾಜೇಶ್ ರಾವ್.

ಬಿಜೆಪಿಯ ಅಲಿಖಿತ ನಿಯಮದಂತೆ ಪರ್ಯಾಯ ನಾಯಕ ಸಿದ್ಧವಾಗಬೇಕು. ಬಿಜೆಪಿ ಕೇವಲ ಮೋದಿಗೆ ಒಗ್ಗಿಕೊಳ್ಳದೆ ಪಕ್ಷವಾಗಿ ಚುನಾವಣೆ ಎದುರಿಸುವಂತಾಗಬೇಕು. ಮುಂದಿನ ಲೋಕಸಭಾ ಚುನಾವಣೆಗೆ ದೇಶದಲ್ಲಿ ಆನ್‍ಲೈನ್ ಚುನಾವಣಾ ವ್ಯವಸ್ಥೆ ಜಾರಿಗೆ ತಂದು, ಮತದಾನವನ್ನು ಕಡ್ಡಾಯಗೊಳಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT