ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕಿ ಪಡಿತರ ಚೀಟಿ ಶೀಘ್ರ ವಿತರಿಸಿ

ಅಧಿಕಾರಿಗಳಿಗೆ ಸಚಿವ ಉಮೇಶ್‌ ಕತ್ತಿ ಸೂಚನೆ
Last Updated 8 ಮೇ 2022, 4:14 IST
ಅಕ್ಷರ ಗಾತ್ರ

ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 3,668 ಆದ್ಯತಾ ಪಡಿತರ ಚೀಟಿಗಳು ಹಾಗೂ 3,370 ಆದ್ಯತೇತರ ಪಡಿತರ ಚೀಟಿಗಳ ವಿತರಣೆ ಬಾಕಿ ಉಳಿದಿದ್ದು, ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಅರಣ್ಯ ಇಲಾಖೆಯ ಸಚಿವ ಉಮೇಶ್ ಕತ್ತಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ಆಹಾರ ಇಲಾಖೆ, ಕಾನೂನು ಮಾಪನಶಾಸ್ತ್ರ ಮತ್ತು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

3,946 ಅನರ್ಹ ಪಡಿತರ ಚೀಟಿಗಳಿಗೆ ಒಟ್ಟು ₹15,78,731 ದಂಡ ವಸೂಲಿ ಮಾಡಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಸಭೆಗೆ ತಿಳಿಸಿದರು. ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಈ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಗೆ ನಿಗದಿ ಪಡಿಸಲಾದ ಸತ್ಯಾಪನಾ ಶುಲ್ಕದ ಗುರಿ ಮುಟ್ಟುವಂತೆ ಹಾಗೂ ತೂಕ ಮತ್ತು ಅಳತೆಯಲ್ಲಿ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇಲಾಖೆ ವತಿಯಿಂದ ಹೆಚ್ಚಿನ ತಪಾಸಣೆ ನಡೆಸುವಂತೆ, ಸಚಿವ ಉಮೇಶ್ ಕತ್ತಿ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಜಿ. ಕುಲಕರ್ಣಿ ಅವರಿಗೆ ಸೂಚನೆ ನೀಡಿದರು.

ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಪ್ರತಿ ವರ್ಷ ಸತ್ಯಾಪನ ಶುಲ್ಕ ಸಂಗ್ರಹಕ್ಕೆ ಈಗಾಗಲೇ ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸತ್ಯಾಪನಾ ಶುಲ್ಕದ ಸಂಗ್ರಹಣೆ ಹೆಚ್ಚಾಗಬೇಕು. ಪೆಟ್ರೋಲ್ ಬಂಕ್‌ಗಳು, ಕಿರಾಣಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಹಾಗೂ ಇತರೆ ಅಂಗಡಿಗಳಲ್ಲಿ ತೂಕ ಮತ್ತು ಅಳತೆ ಪ್ರಮಾಣಗಳಲ್ಲಿ ವಂಚಿಸುವ ಪ್ರಕರಣಗಳನ್ನು ಹೆಚ್ಚಾಗಿ ಪತ್ತೆ ಮಾಡಬೇಕು ಎಂದು ಹೇಳಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ 154 ಪೆಟ್ರೋಲ್ ಬಂಕ್‌ಗಳಿದ್ದು ಅವುಗಳನ್ನು ಆಗಾಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ, ಈಗಾಗಲೇ ವಂಚನೆ ಮಾಡಿದ ನಾಲ್ಕು ಬಂಕ್‌ಗಳ ವಿರುದ್ದ ದಂಡ ವಿಧಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಕಾನೂನು ಮಾಪನಶಾಸ್ತ್ರ ಇಲಾಖೆ ನಿಗದಿಪಡಿಸಿದ ಗುರಿ ಮುಟ್ಟಬೇಕು ಹಾಗೂ ಗ್ರಾಮ ಪಂಚಾಯಿತಿ, ತಾಲ್ಲೂಕುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT