ಬಂಟ್ವಾಳ: ಇಲ್ಲಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಅಧಿಕಾರಿಗಳಿಂದ ಪರಿಹಾರ ದೊರಕಿಸಿ ಕೊಡುವ ಪ್ರಯತ್ನ ಮಾಡಿದರು. ಸುಮಾರು 92 ದೂರುಗಳು ಸಲ್ಲಿಕೆಯಾದವು.
ತಹಶೀಲ್ದಾರ್ ರಶ್ಮಿ ಎಸ್.ಆರ್., ಗ್ರೇಡ್ 2 ತಹಶೀಲ್ದಾರ್ ಕವಿತಾ, ಉಪತಹಶೀಲ್ದಾರ್ ನರೇಂದ್ರನಾಥ್ ಭಟ್, ರಾಜೇಶ್ ನಾಯ್ಕ್, ದಿವಾಕರ ಮುಗುಳ್ಯ, ನವೀನ್ ಬೆಂಜನಪದವು, ವಿಜಯ ವಿಕ್ರಮ, ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್ಯ, ಕುಮಾರ್, ಮಂಜುನಾಥ್, ವಿಶು ಕುಮಾರ್, ಸೀತಾರಾಮ್ ಕಮ್ಮಾಜೆ ಸಾರ್ವಜನಿಕರ ದೂರುಗಳಿಗೆ ಉತ್ತರಿಸಿದರು.
ಸರ್ವೆ ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸ ಆಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ದೂರಿದರು. ಪುರಸಭಾ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ಎರಡು ವರ್ಷಗಳಿಂದ ಸರ್ವೆ ಇಲಾಖೆ ಅಡ್ಡಿಯಾಗಿದೆ ಎಂದು ಎ.ಗೋವಿಂದ ಪ್ರಭು ಮತ್ತು ಹರಿಪ್ರಸಾದ್ ಆರೋಪಿಸಿದರು.
‘ಬಾಡಿಗೆ ಮನೆಯಲ್ಲಿ ವಾಸವಾಗಿರುವ ನನಗೆ ಬಿಪಿಎಲ್ ಪಡಿತರ ಚೀಟಿ ನೀಡಿಲ್ಲ’ ಎಂದು ನರಿಕೊಂಬು ಗ್ರಾಮದ ಮಹಿಳೆಯೊಬ್ಬರು ದೂರು ಸಲ್ಲಿಸಿದರು. ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಕಾಲುದಾರಿಗೆ ಕೊಳಚೆ ನೀರು ಬಿಟ್ಟು ಮೋರಿ ಬಂದ್ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು. ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ದೂರಿಗೆ ಸಂಬಂಧಿಸಿ ಅಲ್ಲಿನ ಪಿಡಿಒಗಳಿಗೆ ಕರೆ ಮಾಡಿ ಶಾಸಕರು ಮಾತುಕತೆ ನಡೆಸಿದರು.
ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಜಮೀನು ಅಗತ್ಯವಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಮಯ್ಯ ಹೇಳಿದರು. 94ಸಿ ಮತ್ತು 94ಸಿಸಿ ಅರ್ಜಿ ವಿಲೇವಾರಿ ಮಾಡುತ್ತಿಲ್ಲ. 11ಇ ನಕ್ಷೆ ಪಡೆಯಲು ಸರ್ಕಾರದ 1-5 ನಿಯಮಾವಳಿ ಅಡ್ಡಿಯಾಗಿದೆ ಎಂಬ ಬಗ್ಗೆ ಹೆಚ್ಚು ದೂರುಗಳು ಕೇಳಿ ಬಂದವು. ‘ ಶಾಸಕರೇ ಬಂದು ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲು ಸ್ವೀಕರಿಸುವ ಮೂಲಕ ತಾಲ್ಲೂಕು ಕಚೇರಿ ಆಡಳಿತಕ್ಕೆ ಚುರುಕು ಮೂಡಿಸಿದ್ದಾರೆ’ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ಚೆಕ್ ವಿತರಣೆ ಮತ್ತು 94ಸಿ ಹಕ್ಕುಪತ್ರ ವಿತರಿಸಲಾಯಿತು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬೂಡ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪ್ರಮುಖರಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮಾನಾಥ ರಾಯಿ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ವಕೀಲ ರಂಜಿತ್ ಮೈರ, ವಿಶ್ವನಾಥ್ ಚಂಡ್ತಿಮಾರ್, ಪ್ರಣಾಮ್ ಅಜ್ಜಿಬೆಟ್ಟು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.