ಮಂಗಳವಾರ, ಮಾರ್ಚ್ 28, 2023
33 °C

ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರವಿಲ್ಲ: ಶಾಸಕ ವೇದವ್ಯಾಸ ಕಾಮತ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ಯಾವುದೇ ಪ್ರಸ್ತಾವಗಳು ಸರಕಾರದ ಮುಂದಿಲ್ಲ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡೂ ಹುದ್ದೆಗಳನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾವ ಇತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಆಯುಕ್ತರ ಹುದ್ದೆ ಮಾತ್ರ ಗೋವಾಕ್ಕೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಆದರೆ, ಸಂಪೂರ್ಣ ಕಚೇರಿಯೇ ಗೋವಾದ ಕಚೇರಿ ಜತೆಯಲ್ಲಿ ವಿಲೀನವಾಗುತ್ತಿದೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಮಂಗಳೂರಿನ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸುಮಾರು ₹ 4 ಸಾವಿರ ಕೋಟಿಗೂ ಹೆಚ್ಚು ಆದಾಯ ಬರುತ್ತಿದೆ. ಹಾಗಾಗಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ. ನಾನೂ ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರ ಜತೆ ಮಾತನಾಡಿ ಪ್ರಧಾನ ಆಯುಕ್ತರ ಹುದ್ದೆಯನ್ನೂ ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಆದಾಯ ತೆರಿಗೆ ಕಚೇರಿಯೇ ಇಲ್ಲಿಂದ ಗೋವಾಕ್ಕೆ ಹೋಗಲಿದೆ ಎಂಬ ಅರ್ಥದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ. ‘ಇಲ್ಲಿನ ತೆರಿಗೆದಾರರು ಗೋವಾಕ್ಕೆ ಅಲೆದಾಡಬೇಕಾಗುತ್ತದೆ’ ಎಂದು ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ‘ಕಚೇರಿಯೇ ಸ್ಥಳಾಂತರ ಆಗುತ್ತದೆ’ ಎಂದು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಮಾಡಬಾರದು ಎಂದು ಶಾಸಕ ಕಾಮತ್  ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು