ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರನ್ನೂ ಮಲಿನಗೊಳಿಸುವುದನ್ನು ತಡೆಬೇಕಿದೆ: ಭಾಸ್ಕರ ಶೆಟ್ಟಿ

Published 19 ಮೇ 2024, 5:58 IST
Last Updated 19 ಮೇ 2024, 5:58 IST
ಅಕ್ಷರ ಗಾತ್ರ

ಮಂಗಳೂರು: ‘ಸಮಾಜಕ್ಕೆ ಆಕ್ಸಿಜನ್ ಪೂರೈಸುವಂತಹ ಕಾರ್ಯವನ್ನು ನಿರ್ವಹಿಸುತ್ತಿರುವವರು ಶಿಕ್ಷಕರು. ಅವರನ್ನೂ ಮಲಿನಗೊಳಿಸುವಂತಹ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇನ್ನು ತಡೆಯಬೇಕಾದರೆ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿಕ್ಷಕರು ಆಲೋಚಿಸಿ ಮತ ನೀಡಬೇಕು’ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭಾಸ್ಕರ ಶೆಟ್ಟಿ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಯಲ್ಲಿ ಶಿಕ್ಷಕರಿಗೆ ಪ್ರಾತಿನಿಧ್ಯವಿಲ್ಲ. ವಿಧಾನ ಪರಿಷತ್ತಿನ ಆರು ಸ್ಥಾನಗಳು ಶಿಕ್ಷಕರಿಗೆ ಮೀಸಲಿದ್ದು, ಈ ಪ್ರಾತಿನಿಧ್ಯವನ್ನಾದರೂ ಉಳಿಸಿಕೊಳ್ಳಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೇಧಾವಿಗಳು ಇದ್ದಾರೆ. ಆದರೆ, ಶೈಕ್ಷಣಿಕ ರಂಗದ ಅನುಭವ ಇಲ್ಲದವರು ರಾಜಕೀಯ ಪ್ರಭಾವ ಬಳಸಿ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದಾರೆ. ಇದನ್ನು ತಡೆಯಲು ಶಿಕ್ಷಕರು ಗಟ್ಟಿ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ ವೃತ್ತಿ ಆರಂಭಿಸಿದ ನಾನು, ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿ, ಲೋಕ ಶಿಕ್ಷಣ ಅಧಿಕಾರಿಯಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಡಯೆಟ್ ಪ್ರಾಂಶುಪಾಲನಾಗಿ, ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ಶಿಕ್ಷಣ ಕ್ಷೇತ್ರದ ಅಗತ್ಯಗಳ ಬಗ್ಗೆ ಅರಿತಿದ್ದು, ಶಿಕ್ಷಕರ ಹಾಗೂ ಶಿಕ್ಷಣ ರಂಗದ ಸಮಸ್ಯೆಗಳಿಗೆ ಧ್ವನಿಯಾಗಬಲ್ಲೆ. ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ‌ ಸಕಾಲದಲ್ಲಿ ಪಾವತಿ ಆಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಹಾಗೂ ನವೀಕರಣಕ್ಕೆ ಏಕಗವಾಕ್ಷಿ ವ್ಯವಸ್ಥೆಯ ಅಗತ್ಯವಿದೆ. ಕೆಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳಲ್ಲಿ, ಮೌಲ್ಯಮಾಪನ ವಿಧಾನಗಳಲ್ಲಿ ಹಾಗೂ ಫಲಿತಾಂಶ ಪ್ರಕಟಣೆಯಲ್ಲಿ ವ್ಯತ್ಯಾಸಗಳಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೇ 20ರಷ್ಟು ಕೃಪಾಂಕ ನೀಡುವ ಸ್ಥಿತಿ ರಾಜ್ಯದಲ್ಲಿದೆ. ತಾಂತ್ರಿಕ, ವೈದ್ಯಕೀಯ, ಪಾಲಿಟೆಕ್ನಿಕ್, ಡಿಪ್ಲೊಮಾ ಹಾಗೂ  ಕೃಷಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರಿಗೆ ಅವರ ಶೈಕ್ಷಣಿಕ ಅರ್ಹತೆಗಳ ಆಧಾರದಲ್ಲಿ ಯೋಗ್ಯ ವೇತನ, ಬಡ್ತಿ ಸಿಗುತ್ತಿಲ್ಲ. ಇದನ್ನು ಸರಿಪಡಿಸಬೇಕಿದೆ. ಹಳೆ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕಿದೆ’ ಎಂದರು.

‘ಚಿತ್ರಕಲೆ, ಸಂಗೀತ ಶಿಕ್ಷಕ ಮುಖ್ಯೋಪಾಧ್ಯರಾಗಿದ್ದನ್ನು ನಾನು ನೋಡಿಲ್ಲ. ವಿದ್ಯಾರ್ಥಿಗಳನ್ನು ಕ್ರೀಡೆಗೆ ಕರೆದೊಯ್ಯುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಗೌರವಧನ‌ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಸಿಗಬೇಕಾದರೆ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಗೆಲ್ಲಬೇಕು’ ಎಂದರು.

ವಕೀಲ ಮಂಜುನಾಥ್, ನಿವೃತ್ತ ವೈದ್ಯ ಸುಬ್ಬಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ರಮೇಶ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT