ಮಂಗಳವಾರ, ಮೇ 17, 2022
26 °C
ಪ್ರತಾಪಸಿಂಹ ನಾಯಕ ವಿಷಾದ

ರಾಜಕೀಯ ಮೇಲಾಟಕ್ಕೆ ವಿಧಾನ ಪರಿಷತ್ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ತನ್ನದೇ ಆದ ಮೌಲ್ಯ ಹೊಂದಿರುವ ವಿಧಾನ ಪರಿಷತ್‌ನ ವೇದಿಕೆಯನ್ನು ಕಾಂಗ್ರೆಸ್‌ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಬಾರಿಗೆ ವಿಧಾನ ಪರಿಷತ್ ಸ್ಥಾನ ಪಡೆದಿರುವ ನನಗೆ, ಅಧಿವೇಶನದಲ್ಲಿ ಕಾಂಗ್ರೆಸ್ಸಿಗರು ನಡೆದುಕೊಂಡ ರೀತಿ ನೋವು ತಂದಿದೆ. ಶತಮಾನದ ಇತಿಹಾಸ ಇರುವ ವಿಧಾನ ಪರಿಷತ್‌ಗೆ ಅಭಿಮಾನಪಡುವ ಪರಂಪರೆ ಇದೆ. ಪಕ್ಷ ರಾಜಕೀಯ ಹೊರತಾದ ವ್ಯಕ್ತಿಗಳು ಇರುವ ಇಲ್ಲಿ ಚಿಂತನ–ಮಂಥನ ನಡೆಯಬೇಕು. ಆದರೆ, ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ಸಿಗರು, ಜೆಡಿಎಸ್‌–ಕಾಂಗ್ರೆಸ್ ಪಕ್ಷಗಳ ನಾಯಕರ ನಡುವಿನ ಅಭಿಪ್ರಾಯ ಭೇದಗಳನ್ನು ವ್ಯಕ್ತಪಡಿಸಲು ಈ ವೇದಿಕೆಯನ್ನು ಉಪಯೋಗಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಳೆದ ಮೂರು ಅಧಿವೇಶನಗಳಲ್ಲೂ ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ಕಾಂಗ್ರೆಸ್‌ ನಡೆದುಕೊಂಡಿದೆ. ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ಇಲ್ಲದಂತಾಗಿದೆ. ಗೋಹತ್ಯೆ ನಿಷೇಧ ಮಸೂದೆ ಮಂಡಿಸಲು ಅವಕಾಶ ನೀಡದೇ, ಕಾಂಗ್ರೆಸ್‌ ಸದಸ್ಯರು ಗದ್ದಲ ಮಾಡಿದರು. ಅನುಮಾನಗಳಿದ್ದರೆ, ಚರ್ಚಿಸಿ ಪರಿಹರಿಸಿಕೊಳ್ಳುವ ಸಾಧ್ಯತೆ ಇರುವಾಗ, ಕಾಂಗ್ರೆಸ್ ಈ ರೀತಿ ನಡೆದುಕೊಂಡಿದ್ದು, ಮೇಲ್ಮನೆಗೆ ಶೋಭೆಯಲ್ಲ’ ಎಂದು ಹೇಳಿದರು.

‘ಬಹುಮತ ಇಲ್ಲದಾಗ ರಾಜೀನಾಮೆ ಕೊಡುವುದು ಅಥವಾ ಅವಿಶ್ವಾಸ ಎದುರಿಸುವುದು ಸಂಪ್ರದಾಯ. ಆದರೆ, ಸಭಾಪತಿ ಸ್ಥಾನವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು, ಸಭಾಪತಿ ಮೇಲೆ ಕಾಂಗ್ರೆಸ್ಸಿಗರು ಒತ್ತಡ ತಂದರು. ಎಲ್ಲ ಹಂತಗಳಲ್ಲೂ ಕಾಂಗ್ರೆಸ್ಸಿಗರು ಗದ್ದಲ ಮಾಡಿದರೇ ವಿನಾ ಚರ್ಚೆಗೆ ಮುಂದಾಗಲಿಲ್ಲ. ಆಗ, ಅನಿವಾರ್ಯವಾಗಿ, ಧ್ವನಿಮತದ ಮೂಲಕ ಮಸೂದೆಯನ್ನು ಪಾಸು ಮಾಡಬೇಕಾಯಿತು’ ಎಂದು ವಿವರಿಸಿದರು.

‘400ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಗೋ ರಕ್ಷಣೆಗೆ ಮುಂದೆ ಬಂದಿವೆ. ಈ ಮಸೂದೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಈ ಹಿಂದೆಯೇ ಮನವಿ ನೀಡಿದ್ದವು. ಗೋ ರಕ್ಷಣೆಯಿಂದ ಜನರಲ್ಲಿ ಕೃತಜ್ಞತಾ ಭಾವ ಹೆಚ್ಚುತ್ತದೆ. ಸಂವೇದನೆ ಉಳಿಸಿಕೊಳ್ಳಲು ಇದು ಸಹಕಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ರಾಜ್ಯ ಘಟಕದ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು