ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪತ್ರ: ಭರವಸೆಯ ಹೊಸ ‘ಕಿರಣ’

ರೋಡ್ ಶೋದಲ್ಲಿ ಚಿತ್ರ ಪಡೆದುಕೊಂಡು ಹೋಗಿದ್ದ ಪ್ರಧಾನಿಯಿಂದ ಅಭಿನಂದನೆಯ ಮೇಲ್‌
Published 19 ಏಪ್ರಿಲ್ 2024, 7:46 IST
Last Updated 19 ಏಪ್ರಿಲ್ 2024, 7:46 IST
ಅಕ್ಷರ ಗಾತ್ರ

ಮಂಗಳೂರು: ತೈಲವರ್ಣದಲ್ಲಿ ರಚಿಸಿದ ವ್ಯಕ್ತಿಚಿತ್ರವನ್ನು ರೋಡ್‌ ಶೋದಲ್ಲಿ ಕಾಣಿಕೆಯಾಗಿ ನೀಡಿದ್ದ ಕಲಾವಿದ ಕಿರಣ್ ತೊಕ್ಕೊಟ್ಟು ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಇ ಮೇಲ್‌ ಮೂಲಕ ಅಭಿನಂದನಾ ಪತ್ರ ಬಂದಿದೆ.

ಕಳೆದ ಭಾನುವಾರ ಮಂಗಳೂರಿನಲ್ಲಿ ನಡೆದ ರೋಡ್‌ ಷೋದಲ್ಲಿ ಮೋದಿ ಅವರ ತೈಲವರ್ಣದ ಚಿತ್ರವನ್ನು ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿದ್ದ ಕಿರಣ್ ಅವರಿಂದ ಭದ್ರತಾ ಸಿಬ್ಬಂದಿ ಮೂಲಕ ಮೋದಿ ಅವರು ಚಿತ್ರ ಪಡೆದುಕೊಂಡಿದ್ದರು. ಬುಧವಾರ ಸಂಜೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಇ ಮೇಲ್ ಐಡಿ ಮತ್ತು ವಿಳಾಸ ಪಡೆದುಕೊಂಡು ಮೇಲ್ ಕಳುಹಿಸಲಾಗಿದೆ. ಮೋದಿ ಅವರ ಸಹಿ ಇರುವ ಪತ್ರದಲ್ಲಿ ಕಿರಣ್ ಅವರ ಪ್ರತಿಭೆಯನ್ನು ಅಭಿನಂದಿಸಲಾಗಿದೆ.

‘ಅತ್ಯುತ್ತಮ ಕೌಶಲದಿಂದ ತಾವು ರಚಿಸಿದ ಚಿತ್ರವು ದೇಶದ ಯುವಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಪ್ರಗತಿಪರ ಭಾರತವನ್ನು ನಿರ್ಮಿಸಲು ಮತ್ತು ಯುವಜನರಿಗೆ ಪ್ರಗತಿಪರ ಭವಿಷ್ಯವನ್ನು ನೀಡಲು ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಅಭಿಮಾನದ ಕಾಣಿಕೆಯು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ದೇಶಕ್ಕಾಗಿ ಇನ್ನಷ್ಟು ಹೆಚ್ಚು ಶ್ರಮದಿಂದ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ’ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

‘2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಭವಿಷ್ಯ ಯುವಶಕ್ತಿಯ ಕೈಯಲ್ಲಿ ಭದ್ರವಾಗಿರುತ್ತದೆ ಎಂಬುದರ ಬಗ್ಗೆ ಸಂದೇಹವೇ ಬೇಡ ಎನ್ನುವುದನ್ನು ನಿಮ್ಮಂಥ ಉತ್ಸಾಹಿಗಳು ಸಾಬೀತು ಮಾಡಿದ್ದಾರೆ. ಭಾವನೆಗಳಿಗೆ ಇನ್ನಷ್ಟು ಬಣ್ಣ ತುಂಬಲು ನಿಮಗೆ ಸಾಧ್ಯವಾಗಲಿ, ಒಳಿತಾಗಲಿ’ ಎಂದು ಮೋದಿ ಹೇಳಿದ್ದಾರೆ.

‘ಮೋದಿ ಅವರು ಚಿತ್ರವನ್ನು ಪಡೆದುಕೊಂಡಾಗಲೇ ನಾನು ನನ್ನನ್ನು ಮರೆತಿದ್ದೆ. ಈಗ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಅವರ ಹಸ್ತಾಕ್ಷರ ಇರುವ ಪತ್ರವನ್ನು ಕಳುಹಿಸಿದ್ದಾರೆ. ಹೀಗೆಲ್ಲ ಆಗುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ. ಇದು ನನ್ನ ಭಾಗ್ಯ’ ಎಂದು ಕಿರಣ್ ಹೇಳಿದರು.

‘ನಾನು ಚಿತ್ರದ ಹಿಂದೆ ಸಂಪರ್ಕ ಸಂಖ್ಯೆ ಮತ್ತು ವಿಳಾಸ ಬರೆದಿದ್ದೆ. ನವದೆಹಲಿಯಿಂದ ಕರೆ ಮಾಡಿದ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿ ನಿಮ್ಮ ಚಿತ್ರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ರೋಡ್ ಶೋದ ಜನಜಂಗುಳಿಯಲ್ಲಿ ಕೊಟ್ಟ ಚಿತ್ರವನ್ನು ಪ್ರಧಾನಿಯೊಬ್ಬರು ಜೋಪಾನವಾಗಿ ತೆಗೆದುಕೊಂಡು ಹೋಗುವುದು ಮತ್ತು ಪತ್ರದ ಮೂಲಕ ಅಭಿನಂದನೆ ಸಲ್ಲಿಸುವುದು ಅಚ್ಚರಿಯ ವಿಷಯ’ ಎಂದರು.

ಕಿರಣ್ ತೊಕ್ಕೊಟ್ಟು
ಕಿರಣ್ ತೊಕ್ಕೊಟ್ಟು
ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಸಮಯ ಹೊಂದಿಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ನೀಡಿದ ಚಿತ್ರದ ಬಗ್ಗೆ ಕಾಳಜಿ ವಹಿಸಿ ಪತ್ರವನ್ನು ಬರೆದು ಪ್ರೋತ್ಸಾಹಿಸುವುದು ಎಂದರೆ ನಂಬಲು ಸಾಧ್ಯವಾಗದ ವಿಷಯ. ಇದು ಧನ್ಯತೆಯ ಸಮಯ.
–ಕಿರಣ್‌ ತೊಕ್ಕೊಟ್ಟು ಕಲಾವಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT