ಶುಕ್ರವಾರ, ಆಗಸ್ಟ್ 23, 2019
26 °C

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಐದು ದಿನ ಭಾರಿ ಮಳೆ ಸಾಧ್ಯತೆ

Published:
Updated:

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬುಧವಾರದಿಂದ ಐದು ದಿನಗಳ ಕಾಲ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆ ಬೀಳಲಿದೆ. ಇಲ್ಲಿನ ಕೆಲವು ಪ್ರದೇಶಗಳಲ್ಲಿ 115 ಮಿಲಿ ಮೀಟರ್‌ನಿಂದ 204 ಮಿಲಿ ಮೀಟರ್‌ವರೆಗೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಜಿಲ್ಲಾಡಳಿತಗಳಿಗೆ ನೀಡಿರುವ ಮುನ್ನೆಚ್ಚರಿಕೆ ವರದಿಯಲ್ಲಿ ತಿಳಿಸಿದೆ.

ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಹಾಗೂ ಗುರುವಾರ 64 ಮಿ.ಮೀ.ನಿಂದ 115 ಮಿ.ಮೀ.ವರೆಗೂ ಮಳೆ ಬೀಳಬಹುದು. ನಂತರದ ಮೂರು ದಿನಗಳ ಕಾಲ 115 ಮಿ.ಮೀ.ನಿಂದ 204 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ. ಐದು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲೂ ಹೆಚ್ಚಿನ ಮಳೆ ಬೀಳಲಿದೆ ಎಂಬ ಮುನ್ಸೂಚನೆ ಇದೆ.

ಹಾಸನದಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶನಿವಾರ, ಭಾನುವಾರ ಉತ್ತಮ ಮಳೆಯಾಗಲಿದೆ. ಕಲಬುರ್ಗಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Post Comments (+)