ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಬಿದ್ದ ರಸ್ತೆಯಲ್ಲಿ ಮೂನ್‌ ವಾಕ್‌!

ಮಹಾನಗರ ಪಾಲಿಕೆ ಆಡಳಿತದ ನಿರ್ಲಕ್ಷ್ಯಕ್ಕೆ ವಿರೋಧ
Last Updated 26 ಸೆಪ್ಟೆಂಬರ್ 2019, 9:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ರಸ್ತೆಗಳಲ್ಲಿ ವಿಪರೀತ ಗುಂಡಿಗಳಾಗಿರುವುದರಿಂದ ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವ ಕುರಿತು ಮಂಗಳೂರು ಮಹಾನಗರ ಪಾಲಿಕೆ ಗಮನ ಸೆಳೆಯಲು ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗುಂಡಿಬಿದ್ದ ರಸ್ತೆಯಲ್ಲಿ ನಡೆಸಿರುವ ‘ಮೂನ್‌ ವಾಕ್‌’ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಸೇಂಟ್‌ ಆ್ಯಗ್ನೆಸ್‌ ಶಾಲೆಯ ವಿದ್ಯಾರ್ಥಿನಿ ಆಡ್ಲಿನ್‌ ಡಿಸಿಲ್ವ ಈ ರೀತಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿ. ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರ ಪರಿಕಲ್ಪನೆಯಲ್ಲಿ ‘ಚಂದ್ರನ ಮೇಲಿನ ನಡಿಗೆ’ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಿಂದ ಪ್ರೇರೇಪಿತಳಾಗಿ ಈ ವಿದ್ಯಾರ್ಥಿನಿ ಮಂಗಳೂರಿನಲ್ಲೂ ಅಂತಹ ಪ್ರಯತ್ನ ಮಾಡಿದ್ದಾಳೆ. ಎಂಸಿಸಿ ಸಿವಿಕ್‌ ಗ್ರೂಪ್‌ ನಾಗರಿಕ ಸಂಘಟನೆಯ ಕಾರ್ಯತಂತ್ರದ ಭಾಗವಾಗಿ ಈ ಪ್ರತಿಭಟನೆ ನಡೆದಿದೆ.

ಗಗನಯಾನಿಯಂತೆ ವೇಷ ಧರಿಸಿದ ಬಾಲಕಿ ನಗರದ ಕೇಂದ್ರ ಮಾರುಕಟ್ಟೆಯ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ನಡೆದು ಹೋಗುತ್ತಿರುವ ವಿಡಿಯೊ ಚಿತ್ರೀಕರಿಸಲಾಗಿದೆ. ಅದನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೊ ತುಣುಕನ್ನು ವೀಕ್ಷಿಸಿದ್ದಾರೆ.

‘ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಇನ್ನೂ ಆರಂಭವಾಗಿಲ್ಲ. ಮಳೆಗಾಲ ಮುಗಿದಿದೆ. ಇನ್ನಾದರೂ ಈ ಕೆಲಸ ಆರಂಭವಾಗಬೇಕಿದೆ. ಬಾದಲ್‌ ನಂಜುಂಡಸ್ವಾಮಿ ಅವರ ಪ್ರತಿಭಟನೆಯಿಂದ ಪ್ರೇರಿತರಾಗಿ ನಾವೂ ಈ ಪ್ರಯತ್ನ ಮಾಡಿದ್ದೇವೆ. ಮಹಾನಗರ ಪಾಲಿಕೆ ಆಡಳಿತದ ಕಣ್ಣು ತೆರೆಸುವುದು ಈ ಪ್ರಯತ್ನದ ಹಿಂದಿನ ಉದ್ದೇಶ’ ಎಂದು ಎಂಸಿಸಿ ಸಿವಿಕ್‌ ಗ್ರೂಪ್‌ನ ಸಹ ಸಂಸ್ಥಾಪಕ ಅರ್ಜುನ್‌ ಮಸ್ಕರೇನಸ್‌ ತಿಳಿಸಿದ್ದಾರೆ.

ಇನ್ನೊಂದು ಪ್ರಯತ್ನ: ಅಕ್ಟೋಬರ್‌ 3ರಂದೇ ನಗರದ ಬಸವನಗುಡಿ ರಸ್ತೆಯಲ್ಲಿ ಇಂತಹುದೇ ಪ್ರಯತ್ನ ನಡೆದಿರುವ ಇನ್ನೊಂದು ವಿಡಿಯೊ ತುಣುಕು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್‌ಕೆಜಿ ವಿದ್ಯಾರ್ಥಿನಿ ನಿಯಾ ಸಿ.ಗೋವಿಂದ್‌ ಗುಂಡಿಬಿದ್ದ ರಸ್ತೆಯಲ್ಲಿ ಗಗನಯಾನಿಯನ್ನು ಹೋಲುವ ಉಡುಪು ಧರಿಸಿ ನಡೆದು ಹೋಗುತ್ತಿರುವುದು ವಿಡಿಯೊ ತುಣುಕಿನಲ್ಲಿದೆ.

‘ನಾವು ಕೂಡ ಬಾದಲ್‌ ನಂಜುಂಡಸ್ವಾಮಿ ಅವರ ಪ್ರತಿಭಟನೆಯಿಂದ ಪ್ರೇರೇಪಿತರಾಗಿ ಈ ಪ್ರಯತ್ನ ಮಾಡಿದ್ದೆವು. ವಿಡಿಯೊ ತುಣುಕು ಪ್ರಸಾರವಾಗುತ್ತಿದ್ದಂತೆಯೇ ಸ್ಪಂದಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಬಸವನಗುಡಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ’ ಎಂದು ಬಾಲಕಿಯ ತಾಯಿ ದೀಪಾ ಸತೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT