ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಗೂಂಡಾಗಿರಿ: ಹಿಂದೂ ಯುವತಿಯ ಸಹೋದ್ಯೋಗಿ ಮುಸ್ಲಿಂ ಯುವಕನಿಗೆ ಹಲ್ಲೆ

Last Updated 6 ಡಿಸೆಂಬರ್ 2022, 15:49 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕಂಕನಾಡಿಯ ಚಿನ್ನಾಭರಣ ಮಾರಾಟ ಮಳಿಗೆಯ ಉದ್ಯೋಗಿಯಾಗಿರುವ ಮುಸ್ಲಿಂ ಯುವಕ, ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಷಯ ತಿಳಿದು ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಘಟನೆ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದರು.

‘ಕಂಕನಾಡಿಯಲ್ಲಿ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಯೋಗಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ನಾವೂ ವಿಚಾರಣೆ ನಡೆಸುತ್ತಿದ್ದೇವೆ. ಘಟನೆ ಬಗ್ಗೆ ಇನ್ನೂ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ, ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಕದ್ರಿ ಠಾಣೆಯ ಪೊಲೀಸರು ತಿಳಿಸಿದರು.

ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ಬಜರಂಗ ದಳವು ನಿರಾಕರಿಸಿದೆ. ‘ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿ ಮತ್ತು ಸಹೋದ್ಯೋಗಿ ಮುಸ್ಲಿಂ ಯುವಕನನ್ನು ಪ್ರೀತಿಸಿರುವ ಬಗ್ಗೆ ಆಕೆಯ ತಂದೆ ತಾಯಿ ನಮ್ಮ ಸಂಘಟನೆಗೆ ದೂರು ನೀಡಿದ್ದರು. ನಮ್ಮ ಸಂಘಟನೆಯ ಕಾರ್ಯಕರ್ತರು ಆ ಯುವತಿಯ ತಂದೆ–ತಾಯಿ ಜೊತೆಗೆ ಮಳಿಗೆಗೆ ತೆರಳಿದ್ದರು. ಮುಸ್ಲಿಂ ಯುವಕನಿಗೆ ಬುದ್ಧಿವಾದ ಹೇಳುವಾಗ ಮಾತಿನ ಚಕಮಕಿ ನಡೆದಿದೆ’ ಎಂದು ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ತಿಳಿಸಿದರು.

ನಗರದ ನಂತೂರಿನಲ್ಲಿ ಇದೇ ಮಾದರಿಯ ಮತೀಯ ಗೂಂಡಾಗಿರಿ ಪ್ರಕರಣ ನ.24ರಂದು ನಡೆದಿತ್ತು. ಹಿಂದೂ ಯುವತಿಯ ಜೊತೆಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನನ್ನು ಕೆಳಗಿಳಿಸಿ ಆತನ ಮೇಲೆ ಸಂಘ ಪರಿವಾರದ ಸಂಘಟನೆಗೆ ಸೇರಿದ ಸದಸ್ಯರು ಹಲ್ಲೆ ನಡೆಸಿದ್ದರು. ಕದ್ರಿ ಠಾಣೆಯ ವ್ಯಾಪ್ತಿಯಲ್ಲೇ ನಡೆದ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT