ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಕಡೆ ಬಡಾವಣೆ ಅಭಿವೃದ್ಧಿ ಶೀಘ್ರ ಪೂರ್ಣ

ನಿವೇಶನ ವಿನ್ಯಾಸ ಅನುಮೋದನೆ ಶುಲ್ಕ ಕಡಿತ: ರವಿಶಂಕರ್‌ ಮಿಜಾರು
Last Updated 8 ಜುಲೈ 2021, 4:17 IST
ಅಕ್ಷರ ಗಾತ್ರ

ಮಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) 2020ರ ಫೆಬ್ರುವರಿಯಿಂದ ನಿವೇಶನ ವಿನ್ಯಾಸ ಅನುಮೋದನೆಯ ಶುಲ್ಕದಲ್ಲಿ ಮಾಡ
ಲಾಗಿದ್ದ ಏರಿಕೆಯನ್ನು ಕಡಿತಗೊಳಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಸದ್ಯ ಪರಿಷ್ಕೃತ ದರವನ್ನು ಪಡೆಯಲಾಗುತ್ತದೆ ಎಂದು ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು ತಿಳಿಸಿದರು.

ನಗರದ ಮುಡಾ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಏರಿಕೆಯಾಗಿದ್ದ ವಿನ್ಯಾಸ ಅನುಮೋದನೆ ದರದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಜನರ ಮೇಲಿನ ಆರ್ಥಿಕ ಹೊರೆಯನ್ನು ಮನಗಂಡು ಪ್ರಾಧಿಕಾರದಿಂದ ಆಗಸ್ಟ್‌ನಲ್ಲಿ ಪತ್ರ ಬರೆಯಲಾಗಿತ್ತು. ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ಚರ್ಚಿಸಿ ಇದೀಗ ಶುಲ್ಕವನ್ನು ಕಡಿತಗೊಳಿಸಿ ಆದೇಶಿಸಿದ್ದಾರೆ ಎಂದರು.

ಕಳೆದ ವರ್ಷ ಏರಿಕೆಯಾದ ಶುಲ್ಕದ ಪ್ರಕಾರ ಸೆಂಟ್ಸ್‌ಗೆ ₹6 ಲಕ್ಷ ಬೆಲೆ ಇರುವ ಕಡೆ ಐದು ಸೆಂಟ್ಸ್ ಜಾಗಕ್ಕೆ ಸುಮಾರು ₹33 ಸಾವಿರದವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಪರಿಷ್ಕೃತ ಆದೇಶದ ಪ್ರಕಾರ ಈ ದರ ₹6,800 ಆಗಲಿದೆ ಎಂದು ಹೇಳಿದರು.

3 ಬಡಾವಣೆಗಳ ಅಭಿವೃದ್ಧಿ: ತಾಲ್ಲೂಕಿನ ಕೊಣಾಜೆ, ಕುಂಜತ್ತ್‌ಬೈಲ್ ಹಾಗೂ ಚೇಳ್ಯಾರು ಗ್ರಾಮದಲ್ಲಿ ವಸತಿ ಬಡಾವಣೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದ್ದು, 15 ವರ್ಷಗಳ ಬಳಿಕ ಮುಡಾದಿಂದ ಈ ಮೂರು ಬಡಾವಣೆಗಳಲ್ಲಿ ಜನರಿಗೆ ನಿವೇಶನ ಹಂಚಿಕೆಯಾಗಲಿದೆ ಎಂದು ರವಿಶಂಕರ್ ಮಿಜಾರು ತಿಳಿಸಿದರು.

ಕೊಣಾಜೆಯ 13 ಎಕರೆ 11 ಸೆಂಟ್ಸ್ ಜಮೀನಿನಲ್ಲಿ ₹10.21 ಕೋಟಿ ವೆಚ್ಚದಲ್ಲಿ ಬಡಾವಣೆ ಅಭಿವೃದ್ಧಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಲಾಗಿದೆ. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಪೂರ್ಣ ಆಗಲಿದೆ. ಬಡಾವಣೆಯಲ್ಲಿ 135 ನಿವೇಶನಗಳಿದ್ದು, ಈ ಪೈಕಿ 94 ನಿವೇಶನಗಳು ಹಂಚಿಕೆಗೆ ಲಭ್ಯವಿದೆ. 41 ನಿವೇಶನಗಳು ಮೂಲೆ ಹಾಗೂ ಅನಿಯಮಿತ ನಿವೇಶನಗಳಾಗಿವೆ. ಈ ವರ್ಷದ ಅಂತ್ಯದೊಳಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕುಂಜತ್ತ್‌ಬೈಲ್ ಗ್ರಾಮದ 17 ಎಕರೆ 49 ಸೆಂಟ್ಸ್ ಜಮೀನಿನಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ತಾಂತ್ರಿಕ ಬಿಡ್ ಅನುಮೋದನೆಯ ಹಂತದಲ್ಲಿದೆ. ಬಡಾವಣೆಯಲ್ಲಿ 140 ನಿವೇಶನಗಳಿದ್ದು, 21 ನಿವೇಶನಗಳು ಮೂಲೆ ಹಾಗೂ 23 ಅನಿಯಮಿತ ನಿವೇಶನಗಳಾಗಿವೆ. ಚೇಳ್ಯಾರ್ ಗ್ರಾಮದಲ್ಲಿ 45 ಎಕರೆ 85.50 ಸೆಂಟ್ಸ್ ಜಮೀನಿನಲ್ಲಿ ಬಡಾವಣೆಗೆ ವಿಸ್ತೃತ ಯೋಜನಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಇಲ್ಲಿ 709 ನಿವೇಶನಗಳಿದ್ದು, ಈ ಪೈಕಿ 129 ಅನಿಯಮಿತ ಹಾಗೂ ಮೂಲೆ ನಿವೇಶನಗಳಾಗಿವೆ. ಈ ಯೋಜನೆಗೆ ಸರ್ಕಾರದ ಅನುಮೋದನೆ ಸಿಗಬೇಕಾಗಿದೆ ಎಂದು ವಿವರಿಸಿದರು.

ಮುಡಾ ಆಯುಕ್ತ ದಿನೇಶ್ ಕುಮಾರ್ ಇದ್ದರು.

‘ಉರ್ವ ಮಾರುಕಟ್ಟೆಗೆ ಶೀಘ್ರ ಸ್ಥಳಾಂತರ’

ಬೋಳಾರದ ಉರ್ವ ಮಾರುಕಟ್ಟೆ ಹೊಸ ಕಟ್ಟಡದ ಸಮಸ್ಯೆಗಳನ್ನು ನಿವಾರಿಸಿ ಶೀಘ್ರದಲ್ಲೇ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು ಹೇಳಿದರು.

ಬೋಳಾರದಲ್ಲಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾಮಗಾರಿ 2019ರಲ್ಲಿ ಪೂರ್ಣಗೊಂಡಿದ್ದು, ಅಂಗಡಿ, ಕಚೇರಿ ಸ್ಥಳಾವಕಾಶ ಟೆಂಡರ್ ಏಲಂ ಅನ್ನು ಏಪ್ರಿಲ್ 21ರಂದು ಕರೆಯಲಾಗಿದೆ. ಜುಲೈ 16ರವರೆಗೆ ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.

₹13 ಕೋಟಿ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಾಣವಾಗಿದ್ದು, ಕಟ್ಟಡದಲ್ಲಿ ಗಾಳಿ, ಬೆಳಕು ಸೇರಿದಂತೆ ಕೆಲವೊಂದು ಬದಲಾವಣೆ ಹಾಗೂ ಕೋವಿಡ್ ಕಾರಣದಿಂದ ವ್ಯಾಪಾರಿಗಳ ಸ್ಥಳಾಂತರ ಸಾಧ್ಯವಾಗಿಲ್ಲ. ಮೂರು ಬಾರಿ ಟೆಂಡರ್ ಕರೆದರೂ ಸ್ಥಳೀಯ ವ್ಯಾಪಾರಿಗಳಿಂದ ಆಸಕ್ತಿ ತೋರದ್ದರಿಂದ ನಾಲ್ಕನೇ ಬಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT