ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು : ಹಿಂದೂ ವಿದ್ಯಾರ್ಥಿನಿ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಘಟನೆ, ಇಬ್ಬರ ಬಂಧನ
Published 2 ಮೇ 2023, 17:55 IST
Last Updated 2 ಮೇ 2023, 17:55 IST
ಅಕ್ಷರ ಗಾತ್ರ

ಪುತ್ತೂರು (ದಕ್ಷಿಣ ಕನ್ನಡ): ಹಿಂದೂ ಧರ್ಮದ ಯುವತಿಯೊಂದಿಗೆ ಇದ್ದ ಮುಸ್ಲಿಂ ಯುವಕನೊಬ್ಬನ ಮೇಲೆ ಇಲ್ಲಿನ ಗುಂಪೊಂದು ಮಂಗಳವಾರ ಹಲ್ಲೆ ನಡೆಸಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮರೀಲ್ ಕಾಡುಮನೆ ನಿವಾಸಿ ಕೆ. ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಫಾರಿಶ್ (18) ಹಲ್ಲೆಗೊಳಗಾದ ವಿದ್ಯಾರ್ಥಿ. ಹಲ್ಲೆಯಿಂದಾಗಿ ಯುವಕನ ಮೈಮೇಲೆ ಬಾಸುಂಡೆಗಳು ಎದ್ದಿವೆ.

‘ಹಲ್ಲೆಗೊಳಗಾದ ಯುವಕ ಹಾಗೂ ಆತನ ಜೊತೆಗಿದ್ದ ಯುವತಿ ಇಬ್ಬರೂ ವಿದ್ಯಾರ್ಥಿಗಳು. ಇಬ್ಬರೂ ನಗರದ ಮಾಲ್‌ವೊಂದರ ಚಿತ್ರಮಂದಿರದಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು. ಬಳಿಕ  ಜ್ಯೂಸ್ ಕುಡಿಯಲು ಜೊತೆಯಲ್ಲೇ ಹೋಗಿದ್ದರು. ಆಗ, ಅಲ್ಲಿಗೆ ಬಂದ ಯುವಕರ ಗುಂಪೊಂದು ಮಹಮ್ಮದ್‌ ಫಾರಿಶ್‌ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ’ ಎಂದು ಮೂಲಗಳು ತಿಳಿಸಿವೆ. 

‘ಹಲ್ಲೆಗೊಳದಾಗ ಯುವಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆ ನಡೆಸಿದ ಮೂವರ ಸುಳಿವು ಸಿಕ್ಕಿದೆ. ಅವರಲ್ಲಿ ಪ್ರದೀಪ್‌ ಎಂಬಾತನನ್ನು ಹಾಗೂ ಇನ್ನೊಬ್ಬನನ್ನು ಬಂಧಿಸಿದ್ದು, ಆತ ಬಾಲಕನೇ ಅಥವಾ ವಯಸ್ಕನೇ ಎಂಬ ಬಗ್ಗೆ ವಯಸ್ಸನ್ನು ಇನ್ನಷ್ಟೇ ಖಾತರಿಪಡಿಸಿಕೊಳ್ಳಬೇಕಿದೆ. ಮೂರನೇ ಆರೋಪಿಯ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲ್ಲೆ ಬಗ್ಗೆ ಮಹಮ್ಮದ್‌ ಫಾರಿಶ್‌ ದೂರು ನೀಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ– ಯುವತಿ ಜೊತೆಯಲ್ಲಿ ಸಿನಿಮಾ ವೀಕ್ಷಿಸಲು ತೆರಳಿದ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಐದಾರು ಮಂದಿಯ ಗುಂಪೊಂದು ಬಸ್‌ ನಿಲ್ದಾಣದ ಬಳಿ ಹಲ್ಲೆ ನಡೆಸಿದೆ ಎಂದು ಮಾತ್ರ ಉಲ್ಲೇಖಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದೇವೆ’ ಎಂದೂ ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸ್ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಹಾಗೂ ಪಿಎಸ್‌ಐ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಖಂಡನೆ: ‌‘ಈ ಘಟನೆಯು ಮತೀಯ ಗೂಂಡಾಗಿರಿ’ ಎಂದು ಎಸ್‌ಡಿಪಿಐ ಹಾಗೂ ಮುಸ್ಲಿಂ ಯುವಜನ ಪರಿಷತ್ ಖಂಡಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT