ಭಾನುವಾರ, ಸೆಪ್ಟೆಂಬರ್ 20, 2020
24 °C
ಮಂಗಳೂರಿನಲ್ಲಿ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ

ಈಶಾನ್ಯ ರಾಜ್ಯಗಳಲ್ಲಿನ ಸಮಸ್ಯೆಗಳು ದೇಶದ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಈಶಾನ್ಯ ರಾಜ್ಯಗಳಲ್ಲಿನ ಸಮಸ್ಯೆಗಳು ದೇಶದ ಸಮಸ್ಯೆಯೇ ಹೊರತು, ಅಲ್ಲಿನ ಜನರು ಸೃಷ್ಟಿಸಿದ ಸಮಸ್ಯೆಯಲ್ಲ ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.

ಇಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಗಡಿಪ್ರದೇಶಗಳನ್ನು ಚೀನಾವು ತನ್ನದು ಎನ್ನುತ್ತಿದೆ. ಅಸ್ಸಾಂನಲ್ಲಿ 40 ಲಕ್ಷ ನುಸುಳುಕೋರರು ಇದ್ದಾರೆ. ನಾಗಾಲ್ಯಾಂಡ್‌ನಲ್ಲಿ ಐದು ದಂಗೆಕೋರ ಗುಂಪುಗಳಿವೆ. ಅಲ್ಲಿನ ಕೆಲವು ಜನವಸತಿಗಳಲ್ಲಿ ಕಾಗೆ–ಗುಬ್ಬಿಗಳೂ ಇಲ್ಲ. ಅವರೆಲ್ಲ ತಿಂದಿದ್ದಾರೆ ಎನ್ನಲಾಗುತ್ತದೆ. ಅಲ್ಲಿನ ಪರಿಸ್ಥಿತಿಯಲ್ಲಿ ನೀವಿದ್ದರೂ ಅದನ್ನೇ ಮಾಡುತ್ತಿದ್ದೀರಿ. ಇದು, ದೇಶದ ವೈಫಲ್ಯವೇ ಹೊರತು, ಅಲ್ಲಿನ ಜನ ಸೃಷ್ಟಿಸಿದ ಸಮಸ್ಯೆಯಲ್ಲ ಎಂದು ವಿಶ್ಲೇಷಿಸಿದರು.

ಅರುಣಾಚಲಾ ಪ್ರದೇಶದ ಗಡಿಭಾಗಕ್ಕೆ ನಾನು ಮತ್ತು ಬೌದ್ದ ಧರ್ಮದ ಗುರು ದಲೈಲಾಮ ಹೋಗಿದ್ದೆವು. ‘ವಿಸಾ ಇಲ್ಲದೇ ನಮ್ಮ ಭೌಗೋಳಿಕ ಪ್ರದೇಶಕ್ಕೆ ದಲೈಲಾಮಾ ಮತ್ತು ಪಿ.ಬಿ.ಆಚಾರ್ಯ ಹೇಗೆ ಬಂದರು?’ ಎಂದು ಚೀನಾ ಸರ್ಕಾರವು ಪರೋಕ್ಷವಾಗಿ ನೋಟಿಸ್‌ ನೀಡಿತು. ಈ ಕುರಿತು ದೇಶದ ಎಷ್ಟು ಜನತೆ ಪ್ರತಿಕ್ರಿಯಿಸಿದ್ದಾರೆ?’ ಎಂದು ಪ್ರಶ್ನಿಸಿದ ಆಚಾರ್ಯ, ‘ನೀವು ನಿಮಗಾಗಿ ಬನಾರಸ್‌, ಕಾಶಿ, ಮಕ್ಕಾಗೆ ಹೋಗಬಹುದು. ಆದರೆ, ಅಂಡಮಾನ್‌, ಈಶಾನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವುದು ದೇಶಪ್ರೇಮ ಹಾಗೂ ದೇಶದ ಐಕ್ಯತೆ’ ಎಂದರು.

ದೇಶದ ಸಮಸ್ಯೆಗಳು, ಸ್ವಾತಂತ್ರ್ಯ ಹೋರಾಟದ ಉದ್ದೇಶಗಳನ್ನು ಅರಿಯದೇ, ‘ಭಾರತ ಮಾತ ಕೀ ಜೈ’ಎಂದು ಕೂಗುವುದೂ ವಂಚನೆಯೇ. ಹಿಂದುಳಿದ ಪ್ರದೇಶಗಳು, ಬುಡಕಟ್ಟು, ಪರಿಶಿಷ್ಟ ಜಾತಿ–ಜನಾಂಗಳು, ಬಡವರು, ಶೋಷಿತರಿಗೂ ‘ಸ್ವಾತಂತ್ರ್ಯ’ದ ಫಲ ಸಿಗಬೇಕು ಎಂದರು.

‘ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕನಿಷ್ಠ ಹತ್ತು ಭಾರತೀಯರು ಇರುತ್ತಾರೆ. ಬಾಬಾ ರಾಮದೇವ್ ಕೂಡಾ ಶ್ರೀಮಂತರಾಗಿದ್ದಾರೆ. ಇವರೆಲ್ಲ ಜನರಿಗೆ ಏನು ಕೊಟ್ಟಿದ್ದಾರೆ? ‘ಭಾರತ ಅಧ್ಯಾತ್ಮಿಕ ದೇಶ’ ಎನ್ನುವುದೇ ಬೋಗಸ್‌ ಅನ್ನಿಸಲು ಶುರುವಾಗುತ್ತದೆ. ಅಷ್ಟಮಠಗಳನ್ನು ಹೊಂದಿದ ಉಡುಪಿಯಲ್ಲಿ ನಾನು ಕ್ರಿಶ್ಚಿಯನ್‌ ಶಾಲೆಯಿಂದಾಗಿ ಶಿಕ್ಷಣ ಪಡೆದೆ. ಜರ್ಮನಿಯ ಕ್ರೈಸ್ತ ಮಿಷನರಿಯಾದ ಬಾಸೆಲ್‌ ಮಿಷನ್ ಸೇವೆ ಅನನ್ಯ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು