ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗಖಂಡ’ದಲ್ಲಿ ನಾಗರ ಪಂಚಮಿ ಸಂಭ್ರಮ

ತುಳುನಾಡಿನಲ್ಲಿ ವಿಶೇಷ ಆಚರಣೆ, ನಾಗನಿಗೆ ತಂಬಿಲದ ಹರಕೆ
Last Updated 2 ಆಗಸ್ಟ್ 2022, 2:02 IST
ಅಕ್ಷರ ಗಾತ್ರ

ಮಂಗಳೂರು: ನಾಗರ ಪಂಚಮಿ ಹಬ್ಬ. ದೈವಿಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯ ಮೇಲೆ ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ವಿಶೇಷ. ಸಮಾಜದ ಎಲ್ಲ ಹಿಂದೂ ಸಮುದಾಯಗಳು ಸಮಷ್ಠಿಯಲ್ಲಿ ಆಚರಿಸುವ ಹಬ್ಬಕ್ಕೆ ನಾಗಬನಗಳು ಶೃಂಗಾರಗೊಂಡಿವೆ.

ಅಳಿಯ ಸಂತಾನ ಪದ್ಧತಿ ಇರುವ ತುಳುನಾಡಿನಲ್ಲಿ ಪ್ರತಿ ಕುಟುಂಬಕ್ಕೂ ಒಂದು ನಾಗಬನ ಇರುತ್ತದೆ. ನಾಗನ ಕಲ್ಲುಗಳು ಇರುವ ಈ ತಾಣಕ್ಕೆ ಕುಟುಂಬ ಸಮೇತರಾಗಿ ತೆರಳುವ ಭಕ್ತರು, ದೇವರಿಗೆ ಹಾಲೆರೆದು, ತಂಬಿಲ ಕೊಟ್ಟು ಪೂಜಿಸುತ್ತಾರೆ. ಪುರಾಣದಲ್ಲಿ ತುಳುನಾಡಿಗೆ ನಾಗರಖಂಡ ಎಂದು ಕರೆಯುವ ಉಲ್ಲೇಖವಿದೆ.

‘ತುಳುನಾಡಿನಲ್ಲಿ ನಾಗದೇವರನ್ನು ನಮ್ಮ ಬದುಕಿನ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಆರಾಧಿಸುವುದನ್ನು ಶಾಸ್ತ್ರಕಾರರು ತೋರಿಸಿಕೊಟ್ಟಿದ್ದಾರೆ. ಈ ನೆಲೆಯಲ್ಲಿ ಹಬ್ಬಗಳಲ್ಲಿ ಆದಿಯಾದ ನಾಗರ ಪಂಚಮಿ ಹಬ್ಬವು ವೈಶಿಷ್ಟ್ಯ ಪೂರ್ಣವಾಗಿ ನಡೆಯುತ್ತದೆ. ನಾಗದೇವರು ಪ್ರತ್ಯಕ್ಷವಾಗಿ ಕಾಣುವ ದೇವರು. ನಾಗನು ಶುಭ, ಅಶುಭ ಎರಡನ್ನೂ ಕರುಣಿಸುತ್ತಾನೆ. ನಾಗನನ್ನು ಶಿಲಾ, ಸ್ವರ್ಣ, ರಜತಮಯ ಮೊದಲಾದ ಬಿಂಬೋಪಾದಿಗಳಲ್ಲಿ ಪೂಜಿಸಲಾಗುತ್ತದೆ. ನಾಗರಪಂಚಮಿಯಂದು ಅವನನ್ನು ವಿಶೇಷವಾಗಿ ಹಾಲು, ಸಿಯಾಳ ಮೊದಲಾದ ಪಂಚಾಮೃತ ದ್ರವ್ಯಗಳಿಂದ ಪೂಜಿಸಿ ಅನುಗ್ರಹ ಪಡೆಯುತ್ತೇವೆ. ಇದರಿಂದ ನಮಗೆ ಕಣ್ಣು, ಕಾಲು, ಚರ್ಮವ್ಯಾಧಿ ಇತ್ಯಾದಿಗಳು ದೂರವಾಗುತ್ತವೆ, ಬದುಕು ಪ್ರಗತಿ ಕಾಣುತ್ತದೆ ಎಂಬುದು ನಂಬಿಕೆ’ ಎನ್ನುತ್ತಾರೆ ಹರಿಪ್ರಸಾದ್ ಭಟ್ ಕೊಟ್ಟಾರ.

‘ನಾಗರ ಪಂಚಮಿಯಂದು ಎಲ್ಲ ಸೇರಿ ಕುಟುಂಬದ ನಾಗಬನಕ್ಕೆ ಹೋಗುವುದು ಸಂಪ್ರದಾಯ. ನಾವೆಲ್ಲ ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರು ತಾಯಿ ಮನೆಯ ನಾಗಬನಕ್ಕೆ ನಡೆದುಕೊಂಡರೆ, ಗಂಡನ ಮನೆಯವರು ಅವರ ತಾಯಿಮನೆಯ ನಾಗಬನಕ್ಕೆ ಪೂಜೆ ಸಲ್ಲಿಸುತ್ತಾರೆ. ಬೆಲ್ಲ–ಕಾಯಿ ತುರಿಯಿಂದ ತಯಾರಿಸುವ ಅರಿಸಿನ ಎಲೆಯ ಗಟ್ಟಿಯನ್ನು (ಕಡಬು) ಮಾಡಿ, ದೇವರಿಗೆ ನೈವೇದ್ಯ ಮಾಡಿ, ಮನೆಮಂದಿ ತಿನ್ನುವುದು ಪದ್ಧತಿ’ ಎನ್ನುತ್ತಾರೆ ಹೇಮಾ ಶೀನ ಪೂಜಾರಿ.

‘ದೇಸಿ ದನದ ಬಿಸಿ ಮಾಡದ ಹಾಲನ್ನು ನಾಗರ ಕಲ್ಲಿಗೆ ಎರೆಯಬೇಕು ಎಂಬ ಸಂಪ್ರದಾಯ ಇದೆ. ಕೆಲವರು ನಾಗರ ಕಲ್ಲಿಗೆ ಅಭಿಷೇಕ ಮಾಡಲು ಸಿಯಾಳವನ್ನು ಕೊಂಡೊಯ್ಯುತ್ತಾರೆ. ಕೇದಿಗೆ ಮತ್ತು ಸಂಪಿಗೆ ಹೂ ನಾಗನಿಗೆ ತುಂಬಾ ಇಷ್ಟ. ಮನೆಯಲ್ಲಿ ಹೂ ಬೆಳೆದವರು ಇದನ್ನು ನಾಗನಿಗೆ ಅರ್ಪಿಸುತ್ತಾರೆ. ಪ್ರತಿ ಕುಟುಂಬಕ್ಕೂ ಸಾಂಪ್ರದಾಯಿಕವಾಗಿ ಬಂದಿರುವ ಒಂದು ನಾಗನ ನೆಲೆಯ ಆರಾಧನಾ ಸ್ಥಳ ಇದ್ದೇ ಇರುತ್ತದೆ. ಹಾಗೆ ಇಲ್ಲದವರು, ಕ್ಷೇತ್ರಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ’ ಎನ್ನುತ್ತಾರೆ ಪಂಜಿಮೊಗರುವಿನ ಯಶೋದಾ.

‘ಎಲ್ಲ ಸಮುದಾಯಗಳ ಪ್ರತಿ ಕುಟುಂಬ ನಾಗನನ್ನು ಪೂಜಿಸುವ ಕಾರಣ ಹಬ್ಬದ ದಿನ ನಾಗಬನಗಳಲ್ಲಿ ಜನದಟ್ಟಣಿ ಇರುತ್ತದೆ. ನಾಗನಿಗೆ ಅಭಿಷೇಕ ಮಾಡಿದ ಹಾಲನ್ನು ತಂದು ಬಾವಿಗೆ ಹಾಕುವ ಸಂಪ್ರದಾಯವೂ ಇದೆ. ಬೆಲ್ಲ, ಅರಳು, ತೆಂಗಿನಕಾಯಿ ಒಳಗೊಂಡ ತಂಬಿಲವನ್ನು ನಾಗನಿಗೆ ಸಮರ್ಪಿಸುತ್ತಾರೆ. ಆರೋಗ್ಯ ತೊಂದರೆ ಬಂದಾಗ, ಕುಟುಂಬಕ್ಕೆ ಕಷ್ಟ ಬಂದಾಗ ತಂಬಿಲದ ಹರಕೆ ಹೊತ್ತುಕೊಳ್ಳುವ ರೂಢಿಯೂ ಇದೆ. ಅಂಥವರು ನಾಗರ ಪಂಚಮಿಯಂದು ಈ ಹರಕೆ ತೀರಿಸುತ್ತಾರೆ’ ಎಂದು ಅವರು ತುಳುನಾಡಿನ ಆಚರಣೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT