ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಹಿಂದುತ್ವವಾದಿಗಳಿಗೆ ಈಗ ನಳಿನ್‌ ಟಾರ್ಗೆಟ್‌

ಪುತ್ತೂರು ಹಲ್ಲೆ ಪ್ರಕರಣ; ಒಂದಾಗುತ್ತಿದೆ ವಿರೋಧಿ ಬಣ - ಮೌನಕ್ಕೆ ಶರಣಾದ ಬಿಜೆಪಿ ಮುಖಂಡರು
Published 24 ಮೇ 2023, 16:26 IST
Last Updated 24 ಮೇ 2023, 16:26 IST
ಅಕ್ಷರ ಗಾತ್ರ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿನ ಬಂಡಾಯದ ಕಿಡಿ ಇನ್ನೂ ಆರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ, ಬಜರಂಗದಳದಂತಹ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಹಿಂದುತ್ವವಾದದ ಪ್ರತಿಪಾದಕರಲ್ಲಿ ಕೆಲವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಳಿನ್‌ ಕಣಕ್ಕಿಳಿದರೆ ಸೋಲಿಸುತ್ತೇವೆ’ ಎಂಬ ಸವಾಲನ್ನೂ ಹಾಕುತ್ತಿದ್ದಾರೆ.

‘ಹಿಂದುತ್ವ ವಿಚಾರಧಾರೆಗೆ ಸಂಬಂಧಿಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮುಂದಾಳುಗಳನ್ನು ಉದ್ದೇಶಪೂರ್ವಕವಾಗಿ ಅಧಿಕಾರದಿಂದ ದೂರ ಇಡಲಾಗುತ್ತಿದೆ’ ಎಂಬುದು ಅವರ ಸಿಟ್ಟಿಗೆ ಕಾರಣ.

ಪ್ರವೀಣ್‌ ನೆಟ್ಟಾರು ಹತ್ಯೆ ವೇಳೆ ಹಿಂದುತ್ವವಾದಿ ಕಾರ್ಯಕರ್ತರ ಒಳಬೇಗುದಿ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಹಿಂದೂ ಜಾಗರಣ ವೇದಿಕೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ನಿರಾಕರಿಸಿದಾಗ, ಹಿಂದುತ್ವವಾದಿ ಕಾರ್ಯಕರ್ತರ ಸಿಟ್ಟಿನ ಮತ್ತೊಂದು ರುದ್ರರೂಪದ ದರ್ಶನವಾಯಿತು.

ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪಗೌಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣಕುಮಾರ್ ಪುತ್ತಿಲ ಅವರು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ವಿರುದ್ಧ ಕೇವಲ 4,149 ಮತಗಳ ಅಂತರದಿಂದ ಸೋತರು. ಪುತ್ತಿಲ ಸೋತರೂ ಎದೆಗುಂದದ ಬೆಂಬಲಿಗರು ‘ಸಂಸತ್ತಿಗೆ ಪುತ್ತಿಲ’ ಎಂಬ ಸಂದೇಶವನ್ನು ಈ ಫಲಿತಾಂಶದ ದಿನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.

ಬ್ಯಾನರ್‌ ವಿವಾದ: ಪುತ್ತೂರಿನಲ್ಲಿ ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಸಂಸದ ಸದಾನಂದ ಗೌಡ ಅವರ ಭಾವಚಿತ್ರ ಇರುವ ಬ್ಯಾನರ್‌ ಅಳವಡಿಸಿ ಅದಕ್ಕೆ, ಚಪ್ಪಲಿ ಹಾರ ಹಾಕಿದ ‍ಪ್ರಕರಣದ ಆರೋಪಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್‌ ದೌರ್ಜನ್ಯ ಬಜರಂಗದಳ, ಹಿಂದೂ ಜಾಗರಣ ವೇದಿಕೆಯಂತಹ ಸಂಘಟನೆಗಳವರ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.

ಬ್ಯಾನರ್‌ ಅಳವಡಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಸ್ಥಳೀಯ ಮುಖಂಡರಾದ ಸಂಜೀವ ಮಠಂದೂರು, ಆಶಾ ತಿಮ್ಮಪ್ಪ ಗೌಡ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆಯುವಾಗ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತಾದರೂ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿರಲಿಲ್ಲ. ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದಲೇ ಈ ಪ್ರಕರಣದ ಆರೋಪಿಗಳಿಗೆ ಪೊಲೀಸರು ಮನಸೋ ಇಚ್ಛೆ ಥಳಿಸಿದ್ದಾರೆ ಎಂಬುದು ಪುತ್ತಿಲ ಅಭಿಮಾನಿಗಳ ಆರೋಪ.

ಈ ಪ್ರಕರಣವನ್ನೇ ಅವಕಾಶವಾಗಿ ಬಳಸಿಕೊಂಡು ನಳಿನ್‌ ಕುಮಾರ್‌ ಕಟೀಲ್‌ ವಿರೋಧಿ ಬಣ, ನಳಿನ್‌ ಅವರನ್ನು ಹಣಿಯುವ ಕೆಲಸದಲ್ಲಿ ತೊಡಗಿದೆ. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುತ್ತೂರಿಗೆ ಬಂದು ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಲ್ಲದೇ ಪರೋಕ್ಷವಾಗಿ ನಳಿನ್‌ ವಿರುದ್ಧ ಹರಿಹಾಯ್ದಿದ್ದರು.

ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಹಿಂದುತ್ವವಾದಿಗಳು ಸರದಿಯಂತೆ ಪುತ್ತೂರಿಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ಈ ಘಟನೆಯ ಬೆನ್ನಲ್ಲೇ ‘ಪುತ್ತಿಲ ಪರಿವಾರ’ ಎಂಬ ಸಂಘಟನೆಯೊಂದು ಹುಟ್ಟಿಕೊಂಡಿದ್ದು, ಇತ್ತೀಚೆಗೆ ಪುತ್ತೂರಿನಲ್ಲಿ ಜಾಥಾದ ಮೂಲಕ ಇದರ ಶಕ್ತಿ ಪ್ರದರ್ಶನವೂ ನಡೆದಿದೆ.

ಪೊಲೀಸ್‌ ಹಲ್ಲೆ ಪ್ರಕರಣದ ಬಗ್ಗೆ ಟ್ವೀಟ್‌ ಮಾಡಿ ಖಂಡಿಸಿದ್ದ ನಳಿನ್‌, ನಂತರ ಮೌನಕ್ಕೆ ಶರಣಾಗಿದ್ದಾರೆ. ಈ ಬೆಳವಣಿಗೆಗಳ ವಿಷಯವಾಗಿ ಪ್ರತಿಕ್ರಿಯೆಗೆ ನಳಿನ್‌ ಕುಮಾರ್‌ ಕಟೀಲ್‌ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT