ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಸರಿ ಧ್ವಜ ಹಾಕುವುದು ಹಕ್ಕು: ನಳಿನ್‌ಕುಮಾರ್ ಕಟೀಲ್

Published 30 ಜನವರಿ 2024, 14:23 IST
Last Updated 30 ಜನವರಿ 2024, 14:23 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹನುಮನ ಧ್ವಜ ಹಾಕುವುದರಲ್ಲಿ ತಪ್ಪೇನಿಲ್ಲ. ಕೇಸರಿ ಧ್ವಜ ಹಾಕುವುದು ಹಕ್ಕು. ಈ ದೇಶದಲ್ಲಿ ಕೇಸರಿ ಧ್ವಜ ಇರುವುದು ಕೇವಲ ಧರ್ಮದ ಹಿತದೃಷ್ಟಿಯಿಂದ ಅಲ್ಲ, ಇದು ಪರಂಪರೆಯಿಂದ ನಡೆದುಕೊಂಡು ಬಂದಿದೆ’ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸಮರ್ಥಿಸಿಕೊಂಡರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲ ಹಿಂದುತ್ವ ಹೋರಾಟಗಾರರು, ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಆಗುತ್ತಿದೆ. ಮಂಡ್ಯ ಜಿಲ್ಲೆಯ ಕರೆಗೋಡಿನಲ್ಲಿ ಹನುಮ ಭಕ್ತರು ಹಾಕಿದ್ದ ಧ್ವಜವನ್ನು ಅಧಿಕಾರಿಗಳ ಮೂಲಕ ಕಿತ್ತೊಗೆದು, ರಾಮ ಭಕ್ತರಿಗೆ ಅಪಮಾನ ಮಾಡಲಾಗಿದೆ. ರಾಮ, ಹನುಮ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿ, ಹೋರಾಟ ದಮನಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ’ ಎಂದರು.

ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಹನುಮ ಧ್ವಜ ಹಾರಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್, ‘ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ ಸಂದರ್ಭ ಸೇರಿದಂತೆ ಈ ಹಿಂದೆ ಹತ್ತಾರು ಹೋರಾಟಗಳು ನಡೆದಿವೆ. ಎಲ್ಲ ಸಮುದಾಯಗಳನ್ನು ಕರೆದು ಮಾತುಕತೆ ಮೂಲಕ ಬಗೆಹರಿಸುವ ಬದಲಾಗಿ ಸರ್ಕಾರ ಹೆದರಿಸುವ ತಂತ್ರಗಾರಿಕೆ ಪ್ರಯೋಗಿಸಿದೆ’ ಎಂದರು.

ರಾಮನ ಹೆಸರಿಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಂದ ಹನುಮಂತನ ಭಕ್ತರಿಗೆ ಅಪಮಾನವಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಮಾನಸಿಕತೆಯವರಲ್ಲ, ವಿಚಾರವಾದಿ ಮಾನಸಿಕತೆಯವರು. ಕಾಂಗ್ರೆಸ್‌ನಲ್ಲಿರುವ ಕಮ್ಯುನಿಸ್ಟ್ ಅವರು ಎಂದು ಟೀಕಿಸಿದರು.

‘ಬಿಜೆಪಿಯಿಂದ ಬೇರೆ ಪಕ್ಷಕ್ಕೆ ಹೋದವರು ಮಾತ್ರವಲ್ಲ, ಕಾಂಗ್ರೆಸ್‌ನಿಂದಲೂ ಹಲವರು ಬಿಜೆಪಿಗೆ ಬರಲಿದ್ದಾರೆ. ಕಾದು ನೋಡಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT