ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಸೌದಿಯಿಂದ ಬಂದ 14 ಜನರಿಗೆ ಸೋಂಕು

17 ಜನರಲ್ಲಿ ಕೋವಿಡ್‌–19 ದೃಢ: ಮತ್ತೆ ನಾಲ್ವರು ಗುಣಮುಖ
Last Updated 12 ಜೂನ್ 2020, 15:11 IST
ಅಕ್ಷರ ಗಾತ್ರ

ಮಂಗಳೂರು: ಸೌದಿ ಅರೇಬಿಯಾದಿಂದ ಬಂದ 14 ಜನರು ಸೇರಿದಂತೆ ಶುಕ್ರವಾರ ಒಟ್ಟು 17 ಜನರಿಗೆ ಕೋವಿಡ್‌–19 ತಗಲಿರುವುದು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆಯಾಗಿದೆ.

ಇದೇ 8 ರಂದು ಸೌದಿ ಅರೇಬಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 32 ವರ್ಷದ ವ್ಯಕ್ತಿ ಹಾಗೂ ಇದೇ 10 ರಂದು ಸೌದಿ ಅರೇಬಿಯಾದಿಂದ ಬಂದು ಹೋಟೆಲ್‌ ಕ್ವಾರಂಟೈನ್‌ನಲ್ಲಿದ್ದ 52 ವರ್ಷದ ವ್ಯಕ್ತಿ ಸೋಂಕು ತಗಲಿದೆ.

ಇದರ ಜತೆಗೆ ಇದೇ 5 ರಂದು ಸೌದಿ ಅರೇಬಿಯಾದಿಂದ ಒಂದೇ ವಿಮಾನದಲ್ಲಿ ಬಂದಿದ್ದ 12 ಜನರಲ್ಲಿ ಕೋವಿಡ್–19 ದೃಢವಾಗಿದೆ. 25, 26, 27, 28, 29 ಹಾಗೂ 30 ವರ್ಷದ ಯುವಕರು, 36, 37 ವರ್ಷದ ಪುರುಷರು, 43 ವರ್ಷದ ಇಬ್ಬರು ವ್ಯಕ್ತಿಗಳು, 45 ವರ್ಷದ ಇಬ್ಬರು ಪುರುಷರಿಗೆ ಸೋಂಕು ತಗಲಿದೆ. ಸೌದಿ ಅರೇಬಿಯಾದಿಂದ ಬಂದು, ಸೋಂಕಿತರಾದವರೆಲ್ಲ ಪುರುಷರಾಗಿದ್ದಾರೆ.

ಇದೇ 8 ರಂದು ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿ ಇರಿಸಿದ್ದ 38 ವರ್ಷದ ಮಹಿಳೆ ಹಾಗೂ ಇದೇ 9 ರಂದು ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 52 ವರ್ಷದ ಪುರುಷನಿಗೂ ಸೋಂಕು ದೃಢವಾಗಿದೆ. ಇದೇ 7 ರಂದು ಬೆಂಗಳೂರಿನಿಂದ ಬಂದಿದ್ದ 70 ವರ್ಷದ ವೃದ್ಧರೊಬ್ಬರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಮಾದರಿಗಳ ಸಂಖ್ಯೆ ಹೆಚ್ಚಳ: ಸೌದಿ ಅರೇಬಿಯಾದಿಂದ ಬಾಡಿಗೆ ವಿಮಾನದ ಮೂಲಕ ನೂರಾರು ಪ್ರಯಾಣಿಕರು ನಗರಕ್ಕೆ ಬಂದಿಳಿದಿದ್ದು, ಇದೀಗ ಎಲ್ಲರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರ ಪರಿಣಾಮ ಗಂಟಲು ದ್ರವದ ಮಾದರಿಗಳ ಸಂಖ್ಯೆಯು ಕಳೆದ ಎರಡು ದಿನಗಳಿಂದ ಹೆಚ್ಚಳವಾಗಿದೆ.

ಜೂನ್‌ 2 ರಿಂದಲೇ ವಿದೇಶದಿಂದ ಬರುವ ವಿಮಾನಗಳ ಸಂಖ್ಯೆ ಹೆಚ್ಚಾಗಿದ್ದು, ಕೆಲ ಉದ್ಯಮಿಗಳು ಬಾಡಿಗೆ ವಿಮಾನದ ಮೂಲಕ ಜನರು ಹಾಗೂ ನೌಕರರನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರೆಲ್ಲರನ್ನೂ ಹೋಟೆಲ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ಅವರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗುತ್ತಿದೆ.

ಇದೇ 3 ರಂದು 75, 4 ರಂದು 125, 5 ರಂದು 84, 6 ರಂದು 54, 7 ರಂದು 151, 8 ರಂದು 217, 9 ರಂದು 95, 10 ರಂದು 65, 11 ರಂದು 205 ಹಾಗೂ ಶುಕ್ರವಾರ (ಇದೇ 12) 236 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ 10 ದಿನಗಳಲ್ಲಿ ಒಟ್ಟು 1,307 ಮಂದಿಯ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ.

ನಾಲ್ವರು ಗುಣಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ತಗಲಿದ್ದ ನಾಲ್ವರು ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

40 ವರ್ಷದ ಪುರುಷ, 42 ವರ್ಷದ ಮಹಿಳೆ, 52 ವರ್ಷದ ಪುರುಷ ಹಾಗೂ 59 ವರ್ಷದ ಮಹಿಳೆಯ ಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 129 ಮಂದಿ ಗುಣಮುಖರಾಗಿದ್ದಾರೆ.

ಕಾಸರಗೋಡಿನಲ್ಲಿ ನಾಲ್ವರಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಇಬ್ಬರು ಮಹಿಳೆಯರು ಹಾಗೂ ವಿದೇಶದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರಲ್ಲಿ ಇಬ್ಬರು ಮಹಿಳೆಯರು ಮಂಗಲ್ಪಾಡಿ ಹಾಗೂ ಇತರ ಇಬ್ಬರು ಚೆಮ್ನಾಡ್ ಮತ್ತು ಮಡಿಕೈ ನಿವಾಸಿಗಳಾಗಿದ್ದಾರೆ. ವಳಿಯಪರಂಬ ಮತ್ತು ಚೆಮ್ನಾಡ್‌ನ ತಲಾ ಒಬ್ಬರು ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT