ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂ: ಮೊದಲ ದಿನವೇ 68 ವಾಹನ ವಶ

Last Updated 12 ಏಪ್ರಿಲ್ 2021, 6:42 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂವನ್ನು ನಗರದಾದ್ಯಂತ ಬಿಗಿಯಾಗಿ ಜಾರಿಗೊಳಿಸಲಾಗಿದೆ. ಮೊದಲ ದಿನವಾದ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ 64 ದ್ವಿಚಕ್ರ ವಾಹನಗಳು, 4 ಚತುಷ್ಚಕ್ರ ವಾಹನಗಳು ಸೇರಿದಂತೆ ಒಟ್ಟು 68 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರವನ್ನು ಪ್ರವೇಶಿಸುವ ಹಾಗೂ ನಗರದ ಹಲವೆಡೆ ಒಟ್ಟು 45 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ಶೇ 70 ರಷ್ಟು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ರಾತ್ರಿ 10 ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ನಂತರ ಅನಗತ್ಯವಾಗಿ ವಾಹನ ಹಾಗೂ ಜನರು ಓಡಾಡುವಂತಿಲ್ಲ. ಕದ್ರಿ, ಲೇಡಿಹಿಲ್‌, ಕಂಕನಾಡಿ, ಕೊಟ್ಟಾರ, ಪಂಪ್‌ವೆಲ್‌ ಸೇರಿದಂತೆ ಹಲವೆಡೆ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ರಾತ್ರಿ ಪಾಳಿಯ ಉದ್ಯೋಗ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜನರು, ಪೊಲೀಸರ ಜೊತೆಗೆ ಕೆಲವೆಡೆ ವಾಗ್ವಾದ ನಡೆಸಿದರು.

ನಗರ ಸ್ತಬ್ಧ: ರಾತ್ರಿ 10 ಗಂಟೆಯ ನಂತರ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳ ಸಂಚಾರ ಅತ್ಯಂತ ವಿರಳವಾಗಿತ್ತು. ಹೋಟೆಲ್‌, ರೆಸ್ಟೊರೆಂಟ್‌, ಮದ್ಯದಂಗಡಿ, ಬಾರ್‌ಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ಅಂಗಡಿಗಳು ಬಾಗಿಲು ಮುಚ್ಚಿದ್ದವು.

ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌, ನಗರದ ಹಲವೆಡೆ ಭೇಟಿ ನೀಡಿ, ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.

ಮಾರ್ಶಲ್‌ಗಳ ನೇಮಕ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್–19 ಮಾರ್ಗಸೂಚಿಯ ಪಾಲನೆಗಾಗಿ ಪಾಲಿಕೆ ವತಿಯಿಂದ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿದೆ. ನಗರದಾದ್ಯಂತ 50 ಮಾರ್ಷಲ್‌ಗಳನ್ನು ನಿಯೋಜಿಸಲಾಗಿದ್ದು, ಜನರಿಗೆ ಮಾಸ್ಕ್‌ ಧಾರಣೆ, ಸುರಕ್ಷಿತ ಅಂತರ ಪಾಲನೆಯ ಕುರಿತು ಅರಿವು ಮೂಡಿಸಿದರು.

ಈ ಮಧ್ಯೆ ಕೋವಿಡ್–19 ಮಾರ್ಗಸೂಚಿಯ ಪಾಲನೆಗೆ ಗೃಹರಕ್ಷಕರನ್ನೂ ಬಳಕೆ ಮಾಡಲಾಗುತ್ತಿದೆ. 125 ಗೃಹರಕ್ಷಕರನ್ನು ಜಿಲ್ಲೆಯ ವಿವಿಧೆಡೆ ನಿಯೋಜಿಸಲಾಗಿದೆ. ನಗರದಲ್ಲಿ 60, ಉಳ್ಳಾಲ, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 10, ಬಂಟ್ವಾಳ, ಮೂಡುಬಿದಿರೆ, ಸೋಮೇಶ್ವರ ಪಟ್ಟಣ ಪಂಚಾಯಿತಿ ವ್ಯಾಪ್ತಿ, ಕೋಟೆಕಾರ್, ಮೂಲ್ಕಿ, ಬೆಳ್ತಂಗಡಿ, ವಿಟ್ಲ, ಸುಳ್ಯ, ಕಡಬಗಳಲ್ಲಿ 45 ಗೃಹರಕ್ಷಕರನ್ನು ನಿಯೋಜಿಸಲಾಗಿದೆ.

ಪೊಲೀಸರ ವಿರುದ್ಧ ರೈ ಆಕ್ರೋಶ

ನಗರದ ಹೊರವಲಯದ ಪಡೀಲ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮಾಜಿ ಸಚಿವ ಬಿ. ರಮಾನಾಥ್ ರೈ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಿ.ಮೀ. ಗಟ್ಟಲೆ ಸಂಚಾರ ದಟ್ಟಣೆಯಾಗಿದ್ದು, ಇದರಿಂದಾಗಿ ಸಿಟ್ಟಿಗೆದ್ದ ರಮಾನಾಥ್ ರೈ ಕಾರಿನಿಂದ ಇಳಿದು ಪೊಲೀಸರ ಬಳಿ ತೆರಳಿದರು. ಬ್ಯಾರಿಕೇಡ್ ತೆರವುಗೊಳಿಸಿ ವಾಹನ ಸಂಚಾರಆರಂಭಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT