ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಭಂಡಾರಿಬೆಟ್ಟು ವಸತಿ ಸಂಕೀರ್ಣದಲ್ಲಿ ಈಚೆಗೆ ನಡೆದ ರೌಡಿಶೀಟರ್, ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಅಜೆಕಲ ನಿವಾಸಿ ಸತೀಶ್ ಕುಲಾಲ್, ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ, ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು, ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸೈಯದ್ ಶರೀಫ್, ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ, ರೌಡಿಶೀಟರ್ ಶರಣ್ ಯಾನೆ ಆಕಾಶ್‌ಭವನ ಶರಣ್, ಉಜಿರೆ ನಿವಾಸಿ ರಾಜೇಶ್, ದಿವ್ಯರಾಜ್, ಅನಿಲ್ ಪಂಪ್‌ವೆಲ್ ಬಂಧಿತ ಆರೋಪಿಗಳು.
ಇವರಿಂದ 1 ಬೈಕ್, 2 ಕಾರು, ಮೊಬೈಲ್, ₹2.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ 5 ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಸತೀಶ ಕುಲಾಲ್ ಮತ್ತು ಪ್ರದೀಪ್ ಯಾನೆ ಪಪ್ಪು ಎಂಬವರು ಸುರೇಂದ್ರನ ಸ್ನೇಹಿತನಾಗಿದ್ದು, ಆರೋಪಿ ಪ್ರದೀಪ್ ಚಿನ್ನದ ಉದ್ಯಮಕ್ಕಾಗಿ ಸುರೇಂದ್ರನ ಬಳಿ ₹7 ಲಕ್ಷ ಸಾಲ ಪಡೆದುಕೊಂಡಿದ್ದ. ಆದರೆ, ಅದನ್ನು ವಾಪಸ್ ನೀಡಬೇಕಿತ್ತು. ಸುರೇಂದ್ರನ ಹತ್ಯೆಗೆ ಆಕಾಶ್ ಭವನ ಶರಣ್‌ಗೆ ₹2 ಲಕ್ಷವನ್ನು ಆರೋಪಿ ಪ್ರದೀಪ್ ತಲುಪಿಸಿದ್ದ. ಇನ್ನೊಬ್ಬ ಆರೋಪಿ ವೆಂಕಪ್ಪ ಯಾನೆ ವೆಂಟೇಶ್ ಕೂಡ ಸುರೇಂದ್ರನಿಂದ ಸಾಲ ಪಡೆದುಕೊಂಡಿದ್ದು, ವಾಪಸ್ ನೀಡಬೇಕಿತ್ತು.
ವೆಂಕಟಪ್ಪ ಕೂಡ ಸುರೇಂದ್ರನ ಹತ್ಯೆಗೆ ಸತೀಶ ಕುಲಾಲ್‌ನಿಗೆ ₹90 ಸಾವಿರ ಮುಂಗಡ ನೀಡಿದ್ದ. ಆರೋಪಿ ಶರೀಫ್ ವೈಯಕ್ತಿಕ ದ್ವೇಷದಿಂದ ಕೃತ್ಯದಲ್ಲಿ ಸಹಕರಿಸಿದ್ದರೆ, ಜೈಲಿನಲ್ಲಿದ್ದ ಶರಣ್, ಗಿರೀಶನನ್ನು ಪುಸಲಾಯಿಸಿ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ತೀರಿಸುವಂತೆ ಪ್ರೇರೇಪಿಸಿದ್ದಾನೆ. ದಿವ್ಯರಾಜ್ ಮತ್ತು ಅನಿಲ್ ಪಂಪ್‌ವೆಲ್ ವಾಹನ ವ್ಯವಸ್ಥೆ ಮಾಡಿದ್ದರೆ, ಆರೋಪಿಗಳು ಉಳಿದುಕೊಳ್ಳಲು ಉಜಿರೆ ರಾಜೇಶ್ ಸಹಕರಿಸಿದ್ದಾನೆ. ಈ ಪೈಕಿ ದಿವ್ಯರಾಜ್ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.