ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಗೆ ಜಾರಿಗೆ ಕ್ರಮ: ಎನ್‌ಐಟಿಕೆ ಸಂಸ್ಥಾಪನಾ ದಿನಾಚರಣೆ

ಎನ್‌ಐಟಿಕೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ. ಅನಂತನಾರಾಯಣ
Last Updated 7 ಆಗಸ್ಟ್ 2021, 1:00 IST
ಅಕ್ಷರ ಗಾತ್ರ

ಮಂಗಳೂರು: ಎನ್‌ಐಟಿಕೆಯ 62 ನೇ ಸ್ಥಾಪನಾ ದಿನವನ್ನು ಶುಕ್ರವಾರ ನಗರದ ಎನ್‌ಐಟಿಕೆ ಆವರಣದಲ್ಲಿ ಆಚರಿಸಲಾಯಿತು. ಉಪ ನಿರ್ದೇಶಕ ಪ್ರೊ.ಅನಂತನಾರಾಯಣ ವಿ.ಎಸ್. ಅವರು ಧ್ವಜಾರೋಹಣ ಮಾಡಿದರು. ಹಳೆಯ ವಿದ್ಯಾರ್ಥಿಗಳ ಸಲಹಾ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಅನಂತನಾರಾಯಣ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಜಾರಿಗೊಳಿಸುವ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ. ಇನ್ನೋವೇಶನ್‌ ಲ್ಯಾಬ್‌, ಸಂಶೋಧನೆಗೆ ಒತ್ತು ನೀಡುವ ಮೂಲಕ ಈ ನೀತಿಯು ಕೈಗಾರಿಕೆಗಳ ಸಹಭಾಗಿತ್ವವನ್ನು ಪಡೆಯಲು ಒತ್ತು ನೀಡುತ್ತಿದೆ ಎಂದರು.

ಈ ನಿಟ್ಟಿನಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ. ಅದಕ್ಕಾಗಿಯೇ ಹಳೆಯ ವಿದ್ಯಾರ್ಥಿಗಳ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದರು.

ಸಂಸ್ಥೆಯ ಬೋಧಕೇತರ ಹಾಗೂ ಗುತ್ತಿಗೆ ಸಿಬ್ಬಂದಿಯ ಕಲ್ಯಾಣಕ್ಕಾಗಿ ಎನ್‌ಐಟಿಕೆಯ 1981 ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ₹4.73 ಲಕ್ಷ ನೀಡುವ ಮೂಲಕ ದತ್ತಿನಿಧಿ ಸ್ಥಾಪಿಸಿದ್ದಾರೆ. ಈ ಅನುದಾನದಲ್ಲಿ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೇ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ವಿವರಿಸಿದರು.

ಶುಕ್ರವಾರ ನಡೆದ ಸಮಾರಂಭದಲ್ಲಿ ಎನ್‌ಐಟಿಕೆ ಸಿಬ್ಬಂದಿ ಶ್ರೀನಿವಾಸ್‌ ಆರ್.ಇ. ಅವರ ಪುತ್ರಿ ಅನಿಶಾ ಹಾಗೂ ಎಲ್‌ ಮಹಾದೇವಪ್ಪ ಅವರ ಪುತ್ರ ಎಂ.ಎಸ್‌. ಮಂಜುನಾಥ ಅವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಎನ್‌ಐಟಿಕೆಯ 1994 ನೇ ಬ್ಯಾಚ್‌ ನೀಡಿದ ತ್ರಿಶೂಲ್‌ ಜಲ ಸಂಚಯನ ಯೋಜನೆಯಡಿ ಸಂಸ್ಥೆಯ ಹಾಸ್ಟೆಲ್‌ ತ್ರಿಶೂಲ್‌ದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದ್ದು, ಅಂತರ್ಜಲ ವೃದ್ಧಿ ಮಾಡುವ ಮೂಲಕ ಎನ್‌ಐಟಿಕೆಗೆ ನೀರಿನ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳಲಾಗಿದೆ.

ತ್ರಿಶೂಲ್‌ ಬಾಲಕರ ಹಾಸ್ಟೆಲ್‌, ಕೆನರಾ ಬ್ಯಾಂಕ್‌ ಹಾಗೂ ಎಸ್‌ಬಿಐ ಕಟ್ಟಡಗಳ ಮೇಲ್ಚಾವಣಿಯಿಂದ ಸುರಿಯುವ ನೀರನ್ನು ಕೆರೆಯಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಂಸ್ಥೆಯ ಆವರಣದಲ್ಲಿ 300ಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು. ಇದಕ್ಕಾಗಿ 1994 ನೇ ಬ್ಯಾಂಕ್‌ನ ವಿದ್ಯಾರ್ಥಿಗಳು ₹20 ಲಕ್ಷ ಅನುದಾನ ಒದಗಿಸಿದ್ದಾರೆ.

ಸಿಬ್ಬಂದಿ ಕಲ್ಯಾಣ ಅಧಿಕಾರಿ ಎಂ.ಎಸ್‌. ಭಟ್‌, ಬೋಧಕ, ಬೋಧಕೇತರ ಸಿಬ್ಬಂದಿ ಮಾತನಾಡಿ, ಸಂಸ್ಥೆಯ ಸ್ಥಾಪಕ ಯು. ಶ್ರೀನಿವಾಸ ಮಲ್ಯ ಅವರನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT