ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ನೆಗೆಟಿವ್‌: ಓಮೈಕ್ರಾನ್‌ ಆತಂಕವಿಲ್ಲ

ಅಪಾಯಕಾರಿ ದೇಶಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದ 17 ಮಂದಿ
Last Updated 6 ಡಿಸೆಂಬರ್ 2021, 16:22 IST
ಅಕ್ಷರ ಗಾತ್ರ

ಮಂಗಳೂರು: ಓಮೈಕ್ರಾನ್ ಆತಂಕ ಹೆಚ್ಚುತ್ತಿರುವ ಬೆನ್ನೆಲ್ಲೇ, ಸೋಂಕು ಪೀಡಿತ ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 17 ಜನರು ಬಂದಿದ್ದಾರೆ. ಆದರೆ, ಅವರೆಲ್ಲರ ವರದಿ ನೆಗೆಟಿವ್ ಇರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

‘ಈ ಪೈಕಿ 10 ಮಂದಿ ಮಂಗಳೂರು ತಾಲ್ಲೂಕು, ಒಬ್ಬರು ಪುತ್ತೂರು ತಾಲ್ಲೂಕಿನವರಾಗಿದ್ದು, ಉಳಿದ ಆರು ಜನರು ಬೆಂಗಳೂರು, ಹೈದರಾಬಾದ್‌ ಹಾಗೂ ಕೇರಳದವರಾಗಿದ್ದಾರೆ. ಜಿಲ್ಲೆಯಲ್ಲಿ ಓಮೈಕ್ರಾನ್‌ ತಳಿಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಕೋವಿಡ್‌ ನೋಡಲ್ ಅಧಿಕಾರಿ ಡಾ.ಅಶೋಕ್‌ ತಿಳಿಸಿದ್ದಾರೆ.

‘ರ‍್ಯಾಂಡಮ್‌ ಆಗಿ ಮಾದರಿಗಳನ್ನು ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಕೋವಿಡ್–19 ಕ್ಲಸ್ಟರ್‌ಗಳ ಆಯ್ದ ಮಾದರಿಗಳನ್ನೂ ಕಳುಹಿಸಲು ಸೂಚಿಸಲಾಗಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ ಕ್ಲಸ್ಟರ್‌ಗಳಿಲ್ಲ’ ಎಂದು ತಿಳಿಸಿದ್ದಾರೆ.

‘ಸೋಂಕಿನಿಂದಾಗಿ ‘ಅಪಾಯಕಾರಿ’ ಎನಿಸಿರುವ ದೇಶಗಳಿಂದ ಬಂದು, ಕೋವಿಡ್–19 ದೃಢಪಟ್ಟಲ್ಲಿ, ಅಂಥವರ ಮಾದರಿಯನ್ನು 24 ಗಂಟೆಯಲ್ಲಿ ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಆದರೆ, ಇದುವರೆಗೆ ಬಂದಿರುವ 17 ಜನರ ವರದಿ ನೆಗೆಟಿವ್ ಇದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ದಕ್ಷಿಣ ಆಫ್ರಿಕಾ, ಬೆಲ್ಜಿಯಂ ಸೇರಿದಂತೆ ವಿವಿಧ ದೇಶಗಳಿಂದ ದುಬೈ ಮೂಲಕ ನಗರದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡಲಾಗಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ’ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಜಗದೀಶ್‌ ಹೇಳಿದ್ದಾರೆ.

ಸುಳ್ಯ ತಾಲ್ಲೂಕಿನಲ್ಲಿ ಪ್ರಕರಣವಿಲ್ಲ: ಸುಳ್ಯ ತಾಲ್ಲೂಕಿನಲ್ಲಿ 10 ದಿನಗಳಿಂದ ಒಂದೇ ಒಂದು ಹೊಸ ಕೋವಿಡ್–19 ಪ್ರಕರಣ ವರದಿಯಾಗಿಲ್ಲ. ನವೆಂಬರ್‌ 25ರಿಂದ ಡಿಸೆಂಬರ್ 5ರವರೆಗೆ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಅಲ್ಲದೇ ತಾಲ್ಲೂಕಿನಲ್ಲಿ ಸಕ್ರಿಯ ಪ್ರಕರಣಗಳೂ ಇಲ್ಲದಾಗಿವೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಇರುವ ಸಕ್ರಿಯ ಪ್ರಕರಣಗಳಲ್ಲಿ ಮಂಗಳೂರು ನಗರದ ಪಾಲು ಶೇ 44 ರಷ್ಟಿದೆ. ಮಂಗಳೂರು ಗ್ರಾಮೀಣ ಶೇ 22 ಹಾಗೂ ಬಂಟ್ವಾಳ ತಾಲ್ಲೂಕಿನಲ್ಲಿ ಶೇ 14 ರಷ್ಟು ಸಕ್ರಿಯ ಪ್ರಕರಣಗಳಿವೆ. ಲಸಿಕೆ ಪ್ರಮಾಣ ಹೆಚ್ಚಾಗಿರುವುದು ಹಾಗೂ ಹೆಚ್ಚಿನ ನಿಗಾ ವಹಿಸಿರುವುದರಿಂದ ಕೋವಿಡ್–19 ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ ಎಂದು ಡಾ.ಅಶೋಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT