ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ: ಬರಿದಾದ ನೇತ್ರಾವತಿಯ ಒಡಲು

Published 19 ಏಪ್ರಿಲ್ 2024, 4:53 IST
Last Updated 19 ಏಪ್ರಿಲ್ 2024, 4:53 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಹರಿಯಬಿಡಲಾಗಿದ್ದು, ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರದವರೆಗೆ ಅಣೆಕಟ್ಟೆಯಲ್ಲಿ 4 ಮೀಟರ್ ವರೆಗೆ ಹಲಗೆ ಅಳವಡಿಸಲಾಗಿತ್ತು. ವಿಪರೀತ ಬಿಸಿಲಿನಿಂದ ನೀರು ಆವಿಯಾಗುತ್ತಿದ್ದು, ಅಣೆಕಟ್ಟೆಯಲ್ಲಿ 3.7 ಮೀಟರ್‌ ವರೆಗೆ ನೀರಿನ ಸಂಗ್ರಹವಿತ್ತು. ಗುರುವಾರ ಒಂದೇ ದಿನ 2.1 ಮೀಟರ್‌ನಷ್ಟು ನೀರನ್ನು ಹರಿಯ ಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿದ್ದು ಜನರಲ್ಲಿ ಆತಂಕ ವ್ಯಕ್ತವಾಗಿದೆ.

ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶ್ವಾಲ್ಯದಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟೆ ಬರಿದಾಗತೊಡಗಿತ್ತು. ಜನರಿಗೆ ನೀರು ಒದಗಿಸಲು ಸಮತೋಲನ ಜಲಾಶಯವಾಗಿ ಪರಿಗಣಿಸಿರುವ ಬಿಳಿಯೂರು ಅಣೆಕಟ್ಟೆಯಿಂದ ನೀರು ಒದಗಿಸುವ ಅನಿರ್ವಾಯತೆಗೆ ಒಳಗಾದ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ಕ್ರಮ ಕೈಗೊಂಡಿದೆ. ಗುರುವಾರ ಸಂಜೆ ಗೇಟ್‌ಗಳನ್ನು ಮತ್ತೆ ಅಳವಡಿಸಲಾಗಿದ್ದು, ಪ್ರಸಕ್ತ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್ ವರೆಗೆ ಮಾತ್ರ ನೀರಿದ್ದು, ಅನಿವಾರ್ಯತೆ ಉಂಟಾದರೆ ಮುಂದಿನ ದಿನಗಳಲ್ಲಿ ಅದನ್ನೂ ಬಿಟ್ಟುಕೊಡುವ ಸ್ಥಿತಿ ಉದ್ಭವಿಸಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ನೀರಿನ ಸಮಸ್ಯೆ ಕಾಡುವ ಭೀತಿ: ನದಿಯಲ್ಲಿ ನೀರಿನ ಹರಿವು ನಿಂತಿರುವುದರಿಂದ ಮಳೆ ಬಾರದೆ ಇದ್ದರೆ ನೀರಿನ ಸಂಗ್ರಹವಾಗದು. ಕಳೆದ ವರ್ಷ ಏಪ್ರಿಲ್‌ ವೇಳೆಗೆ ನೇತ್ರಾವತಿ ನದಿ ಸೊರಗಿದ್ದರೂ ಸುಬ್ರಹ್ಮಣ್ಯ ಪರಿಸರದಲ್ಲಿ ಮಾರ್ಚ್‌ನಲ್ಲಿ ಆಗಾಗ್ಗೆ ಮಳೆಯಾಗಿದ್ದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಇತ್ತು. ಆದರೆ, ಈ ಬಾರಿ ಮಳೆಯ ಕೊರತೆಯಿಂದಾಗಿ ಕುಮಾರಧಾರಾ ನದಿಯಲ್ಲಿಯೂ ನೀರಿಲ್ಲ. ಮಳೆ ಆಗದೆ ಇದ್ದರೆ ಈ ಭಾಗದ ಕೃಷಿಕರು ಮತ್ತು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಕಾಡುವ ಭೀತಿ ಎದುರಾಗಿದೆ ಎಂದು ಕೃಷಿಕ ಚಂದ್ರಶೇಖರ ತಾಳ್ತಜೆ ಹೇಳಿದರು.

ಅನಿವಾರ್ಯವಾಗಿ ಈ ಕ್ರಮ: ಶಿವಪ್ರಸನ್ನ

ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಕಾಣಿಸಿದ್ದರಿಂದ ಎಎಂಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿತ್ತು. ಪ್ರಸಕ್ತ ಸರಪಾಡಿ ಮತ್ತು ಕಡೆಶ್ವಾಲ್ಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರಲ್ಲದೆ ಸಮಸ್ಯೆ ಕಾಡಿದಾಗ ಸಮತೋಲನದ ಜಲಾಶಯವಾಗಿದ್ದ ಬಿಳಿಯೂರು ಅಣೆಕಟ್ಟೆಯಿಂದ ಅನಿವಾರ್ಯವಾಗಿ ನೀರನ್ನು ಹೊರಕ್ಕೆ ಬಿಡಬೇಕಾಗಿ ಬಂತು. ಅದರ ಹೊರತಾಗಿಯೂ ಅಣೆಕಟ್ಟಿನಲ್ಲಿ 1.6 ಮೀಟರ್ ನೀರು ಉಳಿಸಿಕೊಳ್ಳಲಾಗಿದೆ. ಈ ಬಾರಿಯ ಬೇಸಿಗೆಯಲ್ಲಿನ ಉಷ್ಣಾಂಶದಿಂದಾಗಿ ನೀರಿನ ಮೂಲಗಳೆಲ್ಲವೂ ಆವಿಯಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಮಳೆ ವಿಳಂಬವಾದರೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ಇನ್ನೊಂದು ಸಮತೋಲನ ಅಣೆಕಟ್ಟೆ ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಿದರೆ ಬಿಳಿಯೂರು ಅಣೆಕಟ್ಟೆಯ ನೀರು ಈ ಪ್ರದೇಶಕ್ಕೆ ಲಭಿಸಬಹುದು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT