ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಕಾರ ಚಳವಳಿ: ಮುಸ್ಲಿಂ ಸೆಂಟ್ರಲ್‌ ಕಮಿಟಿ ಮುಖಂಡರಿಂದ ಸ್ಥಳ ಪರಿಶೀಲನೆ

Last Updated 7 ಜನವರಿ 2020, 10:07 IST
ಅಕ್ಷರ ಗಾತ್ರ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ‘ಅಸಹಕಾರ ಚಳವಳಿ’ ಸಮಾವೇಶವನ್ನು ನೆಹರೂ ಮೈದಾನದ ಬದಲಿಗೆ ಅಡ್ಯಾರ್‌– ಕಣ್ಣೂರಿಗೆ ಸ್ಥಳಾಂತರಿಸಲು ಸಮಿತಿಯ ಮುಖಂಡರು ನಿರ್ಧರಿಸಿದ್ದಾರೆ.

ಅಡ್ಯಾರ್‌– ಕಣ್ಣೂರು ಕೇಂದ್ರ ಜುಮಾ ಮಸೀದಿ ಮುಂಭಾಗದ 15 ಎಕರೆಯಷ್ಟು ವಿಶಾಲವಾಗಿರುವ ಸ್ಥಳದಲ್ಲಿ ಸಮಾವೇಶ ನಡೆಸಲು ಸಮಿತಿ ಯೋಚಿಸಿದೆ. ಈ ಸಂಬಂಧ ಸಮಿತಿಯ ಮುಖಂಡರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಸಮಿತಿಯ ಸಭೆ ನಡೆಯಲಿದ್ದು, ಸಭೆಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 28 ಮುಸ್ಲಿಂ ಸಂಘಟನೆಗಳ ಸಹಯೋಗದಲ್ಲಿ ಇದೇ 4ರಂದು ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸಮಿತಿ ಅನುಮತಿ ಕೋರಿತ್ತು. ಆದರೆ, ಸಭೆ ಮುಂದೂಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರು. ಬಳಿಕ ಸಭೆಯನ್ನು ಮುಂದೂಡಲಾಗಿತ್ತು.

‘ನೆಹರೂ ಮೈದಾನದಲ್ಲಿ ಸಭೆಗೆ ಅನುಮತಿ ನೀಡಲು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ನಿರಾಕರಿಸಿದ್ದಾರೆ. ಸಭೆಯನ್ನು ನಗರದ ಹೊರಭಾಗದಲ್ಲಿ ನಡೆಸುವಂತೆ ಸಲಹೆ ಮಾಡಿದ್ದರು. ಈ ಕಾರಣದಿಂದ ಅಡ್ಯಾರ್‌– ಕಣ್ಣೂರು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಂಗಳವಾರ ದಿನಾಂಕ ಅಂತಿಮಗೊಳಿಸಲಾಗುವುದು’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್‌ ಹಾಜಿ ಬಂದರ್‌ ತಿಳಿಸಿದ್ದಾರೆ.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಬಿ.ಎಂ. ಮುಮ್ತಾಝ್ ಅಲಿ, ಎಸ್.ಎಂ. ರಶೀದ್ ಹಾಜಿ, ಹನೀಫ್ ಹಾಜಿ ಬಂದರ್, ಬಾಷ ತಂಙಳ್‌, ಸಲೀಂ ಸೂಫಿಖಾನ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ, ಇನ್‌ಸ್ಪೆಕ್ಟರ್ ಅಮಾನುಲ್ಲಾ ಸೇರಿದಂತೆ ಹಲವು ಅಧಿಕಾರಿಗಳೂ ಸ್ಥಳಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT