ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೇರಣಾ 2024 ಕಾರ್ಯಾಗಾರ ಉದ್ಘಾಟಿಸಿದ ಯು.ಟಿ.ಖಾದರ್

Published 17 ಜನವರಿ 2024, 16:11 IST
Last Updated 17 ಜನವರಿ 2024, 16:11 IST
ಅಕ್ಷರ ಗಾತ್ರ

ಮಂಗಳೂರು: ‘ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣದ ಮಹತ್ವ ತಿಳಿಯುವುದಿಲ್ಲ.‌ ಜೀವನದ ಹೊಣೆ ಹೆಗಲೇರಿದ ಬಳಿಕವೇ ಅದರ ಮಹತ್ವ ಗೊತ್ತಾಗುತ್ತದೆ. ಶಿಕ್ಷಣದಿಂದ‌ ಮಾತ್ರ‌ ಬದುಕಿನಲ್ಲಿ ಉನ್ನತಿ ಸಾಧಿಸಲು ಸಾಧ್ಯ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ದಕ್ಷಿಣ ಕನ್ನಡ  ಮತ್ತು ಉಡುಪಿ ಜಿಲ್ಲೆಯ ಜಮೀಯತುಲ್‌ ಫಲಾಹ್‌ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ‌ಪಂಚಾಯಿತಿ ಆಶ್ರಯದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತೀಕರಣ ಕಾರ್ಯಾಗಾರ 'ಪ್ರೇರಣಾ 2024' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಶಕಗಳ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿರುತ್ತಿದ್ದವು.  ಕರಾವಳಿಯ ಜನರಿಗೆ ಇದು  ಹೆಮ್ಮೆಯ ವಿಚಾರವಾಗಿತ್ತು. ಜಿಲ್ಲೆಯು ಮತ್ತೆ ಗತವೈಭವಕ್ಕೆ ಮರಳಬೇಕು. ಇಂತಹ ಪ್ರೇರಣಾ ಶಿಬಿರಗಳನ್ನು ಗ್ರಾಮ ಮಟ್ಟದಲ್ಲೂ ಆಯೋಜಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆಯುವ ಶಾಲೆಗಳ ಎಲ್ಲ ಶಿಕ್ಷಕರನ್ನು ಗೌರವಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರೇರಣಾ ತರಬೇತಿ ಪಡೆದ ವಿದ್ಯಾರ್ಥಿಗಳೆಲ್ಲರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ  ವಿಧಾನಮಂಡಲ ಕಲಾಪ ವೀಕ್ಷಣೆಗೂ ಅವಕಾಶ ಕಲ್ಪಿಸುತ್ತೇನೆ' ಎಂದರು. 
ದಕ್ಷಿಣ ಕನ್ನಡ‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್ ಕೆ, 'ಸಮಾಜದಲ್ಲಿ ಉನ್ನತ ಸ್ಥಾನ, ಉದ್ಯೋಗಾವಕಾಶ ಪಡೆಯಲು ಎಸ್ಸೆಸ್ಸೆಲ್ಸಿ ಮೊದಲ ಮೆಟ್ಟಿಲು. ಈ ಪರೀಕ್ಷೆಗೆ ಇನ್ನೂ ಎರಡೂವರೆ ತಿಂಗಳಿದ್ದು, ಈ ಅವಧಿಯನ್ನು  ಸಮರ್ಪಕವಾಗಿ ಕಲಿಕೆಗೆ ವಿನಿಯೋಗಿಸಬೇಕು. ಯಾವ ವಿಷಯದ ಕಲಿಕೆಯಲ್ಲಿ ಹಿಂದಿದ್ದೀರಿ ಎಂಬುದನ್ನು ಮನಗಂಡು ಅದಕ್ಕೆ ಹೆಚ್ಚಿನ‌ ತಯಾರಿ ನಡೆಸಬೇಕು’ ಎಂದು ಸಲಹೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ದಯಾನಂದ‌ ರಾಮಚಂದ್ರ ನಾಯ್ಕ್,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಆರ್.ಈಶ್ವರ್, ಜೇಮ್ಸ್ ಕುಟಿನೊ, ಜಮೀಯತುಲ್ ಫಲಾಹ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಬಪ್ಪಳಿಗೆ, ನಗರ ಘಟಕದ‌ ಮಹಮ್ಮದ್‌ ಬಷೀರ್, ಮಹಮ್ಮದ್‌ ಮನ್ಸೂರ್ ಸಾಹೇಬ್ ಭಾಗವಹಿಸಿದ್ದರು. ಶಿಕ್ಷಕ ರಾಜೇಂದ್ರ ಭಟ್, ಗಣಿತ ಶಿಕ್ಷಕ ಯಾಕೂಬ್ ನಡ, ಹಾಗೂ ಕುದ್ರೋಳಿ ಗಣೇಶ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜಮೀಯತುಲ್‌ಫಲಾಹ್  ಜಿಲ್ಲಾ‌ ಘಟಕದ ಅಧ್ಯಕ್ಷ ಶಾಹುಲ್‌ ಹಮೀದ್ ಸ್ವಾಗತಿಸಿದರು.   ಅಬ್ದುಲ್ ರಜಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಇಮ್ತಿಯಾಜ್ ಖತೀಬ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT