ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 9 ಮೀನುಗಾರರಿಗೆ ಮುಂದುವರಿದ ಶೋಧ

ಕೋವಿಡ್–19 ಪರೀಕ್ಷೆ ನಂತರ ಮೃತದೇಹ ತವರಿಗೆ
Last Updated 16 ಏಪ್ರಿಲ್ 2021, 5:26 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್ ಲೈಟ್‌ಹೌಸ್‌ನಿಂದ 42 ನಾಟಿಕಲ್ ಮೈಲಿ ದೂರದ ಅರಬ್ಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ನಡೆದ ಬೋಟ್ ಅಪಘಾತದಲ್ಲಿ ನಾಪತ್ತೆಯಾಗಿರುವ ಒಂಬತ್ತು ಮೀನುಗಾರರ ಪತ್ತೆಗಾಗಿ ಕರಾವಳಿ ಕಾವಲು ಪಡೆ, ಭಾರತೀಯ ನೌಕಾಪಡೆ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಶೋಧ ಕಾರ್ಯ ಗುರುವಾರವೂ ಮುಂದುವರಿದಿದೆ.

ಈ ದುರಂತದಲ್ಲಿ ಮೃತಪಟ್ಟ ತಮಿಳು ನಾಡಿನ ಅಲೆಗ್ಸಾಂಡರ್ ಮತ್ತು ದಾಸನ್ ಚನ್ನಪ್ಪ ಅವರ ಮೃತದೇಹವನ್ನು ಬುಧವಾರ ಆಂಬುಲೆನ್ಸ್‌ನಲ್ಲಿ ಹಾಗೂ ಪಶ್ಚಿಮ ಬಂಗಾಳದ ಮಾಣಿಕ್‌ದಾಸ್‌ ಅವರ ಮೃತದೇಹವನ್ನು ಗುರುವಾರ ಬೆಂಗಳೂರು ಮೂಲಕ ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಯಿತು.

ಮಾಣಿಕ್‌ದಾಸ್‌ರ ಕೋವಿಡ್-19 ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಬಳಿಕ ಗುರುವಾರ ತವರೂರಿಗೆ ಕಳುಹಿ ಸಿಕೊಡುವ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದುರ್ಘಟನೆಯಲ್ಲಿ ಪಾರಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು ತಮಿಳ್ನಾಡಿನ ವೆಲು ಮುರುಗನ್ ರಾಮಲಿಂಗನ್ ತವರೂರು ಸೇರಿದ್ದರೆ, ನಾಪತ್ತೆಯಾಗಿರುವ ತಮಿಳು ನಾಡಿನ ರಾಮನಾಥಪುರದ ಪಳನಿ, ಪಾಲಮುರುಗನ್, ಮಾಣಿಕ್ಯವೇಣು, ತೆನ್‌ಸ್ಸನ್, ಪಶ್ಚಿಮ ಬಂಗಾಳದ ಉತ್ತಮ್‌ದಾಸ್, ಮಾಣಿಕ್ ದಾಸ್ ಸೇರಿದಂತೆ 9 ಮಂದಿ ಮೀನುಗಾರರ ನಾಪತ್ತೆಯಾಗಿದ್ದಾರೆ.

ಹೆಲಿಕಾಪ್ಟರ್ ಮತ್ತು ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾ ಚರಣೆ ತೀವ್ರಗೊಳಿಸಲಾಗಿದೆ. ಆದರೆ ಗುರುವಾರದವರೆಗೂ ಅವರ ಸುಳಿವು ಸಿಕ್ಕಿಲ್ಲ ಎಂದು ಕರಾವಳಿ ಕಾವಲು ಪೊಲೀಸ್ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಏ.11ರಂದು ಬೆಳಿಗ್ಗೆ 10 ಗಂಟೆಗೆ ಕೇರಳದ ಬೇಪೂರ್‌ನಿಂದ ಹೊರಟ ಮೀನುಗಾರಿಕೆಯ ‘ರಬಾ’ ಹೆಸರಿನ ಈ ಬೋಟ್ ಏ.12ರ ತಡರಾತ್ರಿ ಸುರತ್ಕಲ್ ಲೈಟ್‌ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದಲ್ಲಿ ಸಿಂಗಪುರದ ಹಡಗಿಗೆ ಡಿಕ್ಕಿಯಾಗಿ ಮುಳುಗಡೆಯಾಗಿತ್ತು.

ರೈಲ್ವೆ ಹಳಿಯಲ್ಲಿಯುವಕನ ಶವ ಪತ್ತೆ

ಪುತ್ತೂರು: ಪುತ್ತೂರು- ಕಾಣಿಯೂರು ರೈಲು ಮಾರ್ಗದ ನಡುವಿನ ಸವಣೂರು ರೈಲ್ವೆ ಗೇಟ್ ಬಳಿ ಹಳಿಯಲ್ಲಿ ಯುವಕನೊಬ್ಬನ ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ಕಡಬ ತಾಲ್ಲೂಕಿನ ಪುಣ್ಚತ್ತಾರು ಗ್ರಾಮದ ದೇವಸ್ಯ ದಂಬೆ ನಿವಾಸಿ, ನಿವೃತ್ತ ದೈಹಿಕ ಶಿಕ್ಷಕ ದಿ.ಬಾಲಕೃಷ್ಣ ರೈ ಕೇನ್ಯ ಅವರ ಪುತ್ರ ಮಹೇಶ್ ಯಾನೆ ಸನ್ನು (34) ಮೃತಪಟ್ಟ ಯುವಕ.

ವ್ಯಕ್ತಿಗೆ ಹಲ್ಲೆ– ದೂರು
ಬೆಳ್ತಂಗಡಿ:
ಕುವೆಟ್ಟು ಗ್ರಾಮದ ಪಾಂಡೇಶ್ವರ ಬಳಿ ವ್ಯಕ್ತಿಯೊಬ್ಬರ ಮೇಲೆ ನೆರೆಮನೆಯವರು ಹಲ್ಲೆ ನಡೆಸಿದ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಇಮ್ತಿಯಾಜ್ ಹಲ್ಲೆಗೆ ಒಳಗಾದ ವ್ಯಕ್ತಿ.

ತಾವು ಮನೆ ದುರಸ್ತಿ ಮಾಡುತ್ತಿದ್ದ ವೇಳೆಯಲ್ಲಿ ಲತೀಫ್, ಕೈರುನ್ನೀಸಾ, ಸಲೀಂ, ಸಮೀನಾ, ಇಸಾಕ್, ರಾಯಿದಾ ಬಾನು ಅವರು ಬಂದು, ‘ಇದು ನಮ್ಮ ಮನೆ. ನಿನಗೆ ಇದರಲ್ಲಿ ಹಕ್ಕಿಲ್ಲ’ ಎಂದು ಕಬ್ಬಿಣದ ರಾಡಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT