ಗುರುವಾರ , ಆಗಸ್ಟ್ 18, 2022
27 °C
ಪರಿಷತ್ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರಿಂದ ಪ್ರತಿಭಟನೆ, ಧರಣಿ; ಕೆಲಕಾಲ ಕೋಲಾಹಲ

ಪಾಲಿಕೆ ಹಣದಿಂದ ಶಾಸಕರ ಕ್ಷೇತ್ರಾಭಿವೃದ್ಧಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿ ನಿಧಿಯಿಂದ ಇಬ್ಬರು ಶಾಸಕರ ಕ್ಷೇತ್ರಗಳಿಗೆ ಕೋಟ್ಯಂತರ ಮೊತ್ತವನ್ನು ನೀಡಲು ಆಡಳಿತ ಪಕ್ಷದವರು ಮುಂದಾಗಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. 

ಮಂಗಳೂರು ಮಹಾನಗರಪಾಲಿಕೆ ಸಭಾಂಗಣದಲ್ಲಿ ನಡೆದ ಪರಿಷತ್ ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಅಬ್ದುಲ್ ರವೂಫ್ ಮತ್ತು ನವೀನ್ ಡಿ’ಸೋಜಾ ಅವರು ಮಂಗಳೂರು ದಕ್ಷಿಣ ಮತ್ತು ಸುರತ್ಕಲ್ ಕ್ಷೇತ್ರಗಳ ಶಾಸಕರು ಒಟ್ಟು ಸುಮಾರು ₹ 4 ಕೋಟಿ ಮೊತ್ತದ ಕಾಮಗಾರಿಯ ಅನುಮೋದನೆಗೆ ‍ಪ್ರಸ್ತಾವನೆ ಕಳುಹಿಸಿದ್ದು ಇದನ್ನು ಯಾವ ಕಾರಣಕ್ಕೂ ಒಪ್ಪಬಾರದು ಎಂದು ಹೇಳಿದರು. 

‘ಪಾಲಿಕೆಯಲ್ಲಿ ಮೇಯರ್ ಅದ್ವಿತೀಯರು. ಶಾಸಕರು ಸದಸ್ಯರು ಮಾತ್ರ. ಆದ್ದರಿಂದ ಅವರ ವಿವೇಚನೆಯಡಿ ಕಾಮಗಾರಿಗಳಿಗೆ ಹಣವನ್ನು ಕೊಡಲಾಗುವುದಿಲ್ಲ. ಅವರಿಗೆ ಶಾಸಕರ ನಿಧಿ ಇದೆ. ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಪಾಲಿಕೆ ಹಣವನ್ನು ಕೊಡಲು ಯಾವ ಕಾರಣಕ್ಕೂ ಬಿಡುವುದಿಲ್ಲ’ ಎಂದು ರವೂಫ್ ಹೇಳಿದರು. 

ಇದಕ್ಕೆ ಉತ್ತರಿಸಿದ ಮೇಯರ್ ‘ಜನರ ಬೇಡಿಕೆಗನುಗುಣವಾಗಿ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ’ ಎಂದರು. ಇದರಿಂದ ಕುಪಿತರಾದ ರವೂಫ್‌, ನವೀನ್‌ ಡಿ’ಸೋಜಾ, ಶಶಿಧರ ಹೆಗಡೆ, ಅನಿಲ್ ಕುಮಾರ್‌, ನವೀನ್‌ ಚಂದ್ರ ಆಳ್ವ, ಜೆಸಿಂತಾ, ಭಾಸ್ಕರ್‌ ಮುಂತಾದವರು ಮೇಯರ್ ಪೀಠದತ್ತ ನುಗ್ಗಿ ಘೋಷಣೆಗಳನ್ನು ಕೂಗಿದರು. ಇತರ ಸದಸ್ಯರೂ ಅವರನ್ನು ಹಿಂಬಾಲಿಸಿದರು. ನಂತರ ಧರಣಿ ನಡೆಸಿದರು. ಅಷ್ಟರಲ್ಲಿ ಆಡಳಿತ ಪಕ್ಷದವರು ಅತ್ತ ಧಾವಿಸಿ ಪಾಲಿಕೆ ಆಡಳಿತಕ್ಕೆ ಜಯವಾಗಲಿ ಎಂದು ಕೂಗಿದರು. ಧಿಕ್ಕಾರ–ಜೈಕಾರಗಳು ಹೆಚ್ಚಾದಾಗ ಪರಿಸ್ಥಿತಿ ಗೊಂದಲಮಯವಾಯಿತು. ಹೀಗಾಗಿ ಕೆಲಕಾಲ ಸಭೆಯನ್ನು ಮುಂದೂಡಲಾಯಿತು.

ಮತ್ತೆ ಸಭೆ ಆರಂಭಗೊಂಡಾಗ ‘ಶಾಸಕರ ಕ್ಷೇತ್ರಾಭಿವೃದ್ಧಿಗೆ ಪಾಲಿಕೆ ಹಣ ಹೋಗದಂತೆ ನೋಡಿಕೊಳ್ಳಲಾಗುವುದು’ ಎಂದು ಮೇಯರ್ ಹೇಳಿದರು. ಪಾಲಿಕೆಯ ಆದಾಯ ಹೆಚ್ಚಿದ್ದು ಕಾಮಗಾರಿಗಳಿಗಾಗಿ ಆದ್ಯತೆ ಮೇರೆಗೆ ಸದಸ್ಯರಿಗೆ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಮೇಯರ್ ಘೋಷಿಸಿದರು. 

ಸಭೆಯ ಪ್ರಮುಖ ಅಂಶಗಳು

* ಎ.ಬಿ.ಶೆಟ್ಟಿ ವೃತ್ತವನ್ನು ಕೆಡವಿದ್ದಕ್ಕೆ ವಿರೋಧ ಪಕ್ಷದವರಿಂದ ಆಕ್ಷೇಪ. ವೃತ್ತದ ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ಯಾವುದೇ ಬದಲಾವಣೆ ಇಲ್ಲದೆ ಎ.ಬಿ.ಶೆಟ್ಟಿ ಅವರಿಗೆ ಗೌರವ ಸಲ್ಲಿಸುವುದಾಗಿ ಮೇಯರ್ ಘೋಷಣೆ.

* ಬೀದಿ ದೀಪ ನಿರ್ವಹಣೆ ಬಗ್ಗೆ ಪಕ್ಷ ಭೇದ ಮರೆತು ಸದಸ್ಯರಿಂದ ಬೇಸರ. ಒಂದು ವಾರದಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಕಾಮಗಾರಿ ಆರಂಭಗೊಳ್ಳಲಿದ್ದು ಮೂರು ತಿಂಗಳೊಳಗೆ ಮುಗಿಯುವ ನಿರೀಕ್ಷೆ ಇರುವುದಾಗಿ ಆಯುಕ್ತರಿಂದ ಸ್ಪಷ್ಟನೆ.

* ಕಸ ನಿರ್ವಹಣೆಯಲ್ಲಿ ಆ್ಯಂಟನಿ ಕಂಪನಿಯವರು ನಿರ್ಲಕ್ಷ್ಯ ತೋರುತ್ತಿರುವುದಾಗಿ ಸದಸ್ಯರಿಂದ ದೂರು. ಹೊಸ ಏಜೆನ್ಸಿ ನೇಮಕಕ್ಕೆ 15 ದಿನಗಳ ಒಳಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಆಯುಕ್ತರಿಂದ ಮಾಹಿತಿ.

* ಏರಿಯಾ ಸಭೆಗಳಲ್ಲಿ ತಮ್ಮ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಸದಸ್ಯರಿಂದ ಪಕ್ಷಭೇದವಿಲ್ಲದೆ ಆರೋಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.