ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಹೊರಗುತ್ತಿಗೆ ನೌಕರರ ಪ್ರತಿಭಟನೆ 12 ದಿನಕ್ಕೆ

ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಕೆ
Last Updated 6 ಅಕ್ಟೋಬರ್ 2020, 3:00 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ನೌಕರರ ಪ್ರತಿಭಟನೆ 12 ದಿನದಲ್ಲಿ ಮುಂದುವರಿದಿದ್ದು, ನಗರದ ಲಾಲ್‌ಬಾಗ್‌ನ ಗಾಂಧಿ ಪ್ರತಿಮೆಯ ಬಳಿ ಸೋಮವಾರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.

ಆರೋಗ್ಯ ಕಾರ್ಯಕರ್ತೆ ವೀರಮ್ಮ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯಲ್ಲಿ 15 ರಿಂದ 18 ವರ್ಷಗಳಿಂದ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಇನ್ನೂ ಜಾರಿಯಾಗಿಲ್ಲ. ನಾನು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಗುತ್ತಿಗೆ, ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಕಾರ್ಮಿಕ ಇಲಾಖೆಯ ಸೌಲಭ್ಯ, ಬಿಪಿಎಲ್ ಯಾವುದೂ ಇಲ್ಲದಾಗಿದೆ. ಕನಿಷ್ಠ ವೇತನವೂ ದೊರೆಯದೇ ಬದುಕಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊರೊನಾ ಯೋಧರು ಎಂದು ನಮ್ಮನ್ನು ಆಸ್ಪತ್ರೆಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು, ಯಾವುದೇ ಹೆಚ್ಚುವರಿ ಸೌಲಭ್ಯ ನೀಡಲಾಗುತ್ತಿಲ್ಲ. ಬದಲಾಗಿ ನಮ್ಮ ಬೇಡಿಕೆ ಮುಂದಿಟ್ಟರೆ ನಮ್ಮನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ನಮ್ಮ 14 ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆಯ ವತಿಯಿಂದ ನಡೆಯುತ್ತಿರುವ ಮುಷ್ಕರ ಬೇಡಿಕೆ ಈಡೇರುವವರೆಗೆ ಮುಂದುವರಿಯಲಿದೆ’ ಎಂದರು.

ಗುತ್ತಿಗೆ ಆಧಾರದ ವೈದ್ಯೆ ಡಾ.ಸೌಜನ್ಯಾ ಮಾತನಾಡಿ, ‘ಆರೋಗ್ಯ ಇಲಾಖೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಇಲ್ಲದಾಗಿದೆ. ಒಬ್ಬ ಕಾಯಂ ಸ್ಟಾಫ್‌ ನರ್ಸ್‌ಗೆ ₹ 33 ಸಾವಿರ ವೇತನವಿದೆ. ಗುತ್ತಿಗೆ ಆಧಾರದ ಸ್ಟಾಫ್‌ ನರ್ಸ್‌ಗೂ ಅಷ್ಟೇ ಕೆಲಸ ಇದ್ದು, ವೇತನ ಮಾತ್ರ ₹ 11 ಸಾವಿರ. ಈ ರೀತಿಯ ತಾರತಮ್ಯ ಸರ್ಕಾರದ ಆಸ್ಪತ್ರೆಗಳಲ್ಲಿಯೇ ನಡೆಯುತ್ತಿದೆ. ನಮಗೆ ಭರವಸೆಗಳು ಬೇಡ, ಸರ್ಕಾರದ ಸ್ಪಷ್ಟ ಆದೇಶ ಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT