ಗುರುವಾರ , ಅಕ್ಟೋಬರ್ 22, 2020
22 °C
ಪಣಂಬೂರು ಬೀಚ್‌ ಅಭಿವೃದ್ಧಿ ಯೋಜನೆ ಒಪ್ಪಂದ ಪೂರ್ಣ

12 ವರ್ಷಗಳಲ್ಲಿ 350 ಜನರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಖಾಸಗಿ ಸಹಭಾಗಿತ್ವದಲ್ಲಿ ಬೀಚ್‌ ನಿರ್ವಹಣೆಗಾಗಿ ಆರಂಭಿಸಿದ್ದ ಪಣಂಬೂರು ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯು ಒಪ್ಪಂದದ ಅವಧಿ ಪೂರ್ಣಗೊಂಡಿದೆ. 12 ವರ್ಷಗಳಿಂದ ಪಣಂಬೂರು ಬೀಚ್‌ನ ಸುರಕ್ಷತೆ, ಸ್ವಚ್ಛತೆಯನ್ನು ನೋಡಿಕೊಳ್ಳುತ್ತಿದ್ದ ಈ ಯೋಜನೆಯು ಇದೀಗ ಬೀಚ್‌ನ ನಿರ್ವಹಣೆಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆ.

ಜ್ಯೋತಿ ಅಡ್ವಟೈಸರ್ಸ್‌ ನೇತೃತ್ವದಲ್ಲಿ ಉದ್ಯಮಿ ಐಸಾಕ್‌ ವಾಸ್‌ ಹಾಗೂ ಬ್ಯಾಂಕಿನ ಮಾಜಿ ಉದ್ಯೋಗಿ ಯತೀಶ್ ಬೈಕಂಪಾಡಿ ಅವರ ಮಾರ್ಗದರ್ಶನದಲ್ಲಿ ಬೀಚ್‌ನ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ರೂಪಿಸಲಾಗಿದೆ. ಈ ಹಂತದಲ್ಲಿ ಪ್ರವಾಸೋದ್ಯಮ ಇಲಾಖೆಯು ನಿರ್ವಹಣೆಯ ಒಪ್ಪಂದದ ಅವಧಿ ಪೂರ್ಣಗೊಂಡಿರುವುದಾಗಿ ಪತ್ರ ಬರೆದಿದ್ದು, ಇದರಿಂದ ಪಣಂಬೂರು ಬೀಚ್‌ ನಿರ್ವಹಣೆಯಿಂದ ಹಿಂದೆ ಸರಿಯಲು ಯೋಜನೆಯ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.

‘ಖಾಸಗಿ ಸಹಭಾಗಿತ್ವದಲ್ಲಿ ಸುದೀರ್ಘ ಅವಧಿಗೆ ಬೀಚ್‌ನ ನಿರ್ವಹಣೆ ಮಾಡುವುದು ಉತ್ತಮ ಪ್ರಯತ್ನವಾಗಿತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾದಲ್ಲಿಯೂ ಇಂತಹ ಪ್ರಯತ್ನ ಮಾಡಲು ಇದು ಮಾದರಿಯಾಗಿತ್ತು’ ಎಂದು ಯೋಜನೆಯ ಸಿಇಒ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

‘ಈ ಅವಧಿಯಲ್ಲಿ ಯೋಜನೆಯ ಸಿಬ್ಬಂದಿ 350 ಕ್ಕೂ ಹೆಚ್ಚು ಜನರ ಜೀವ ಉಳಿಸಿದ್ದಾರೆ. ಆದರೆ, ಏಳು ಜನರ ಜೀವ ಉಳಿಸಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿ’ ಎನ್ನುತ್ತಾರೆ ಅವರು.

‘12 ವರ್ಷಗಳ ಅವಧಿಯಲ್ಲಿ ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಪಣಂಬೂರು ಬೀಚ್‌ನಲ್ಲಿ ನಡೆಸಲಾಗಿದೆ. ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ರಾಷ್ಟ್ರೀಯ ಕಬಡ್ಡಿ, ಬೀಚ್‌ ಉತ್ಸವ, ಸರ್ಫಿಂಗ್‌, ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜತೆಗೆ ಜೀವ ರಕ್ಷಕರು, ಬೋಟಿಂಗ್, ಜೆಟ್‌ಸ್ಕೈ ಹಾಗೂ ಬೀಚ್‌ ಸಂಬಂಧಿಸಿದಂತೆ ಇತರ ಕೆಲಸ ಕಾರ್ಯಗಳಿಗಾಗಿ ಹಲವು ಉದ್ಯೋಗಗಳನ್ನೂ ಸೃಷ್ಟಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಯೋಜನೆಯು ಪಣಂಬೂರು ಬೀಚ್‌ನ ನಿರ್ವಹಣೆ ತೆಗೆದುಕೊಳ್ಳುವ ಮೊದಲು ಪ್ರತಿ ವರ್ಷ 20 ಜನರು ಸಮುದ್ರದಲ್ಲಿ ಮುಳುಗಿ ಮೃತಪಡುತ್ತಿದ್ದರು. ಒಪ್ಪಂದದ ನಂತರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿರುವ ತೃಪ್ತಿ ನಮಗಿದೆ’ ಎನ್ನುವುದು ಅವರ ಮಾತು.

ಪ್ರವಾಸಿಗನ ರಕ್ಷಣೆ

ಪಣಂಬೂರು ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಒಪ್ಪಂದದ ಅವಧಿ ಮುಗಿದಿರುವ ಶನಿವಾರವೇ ಮತ್ತೊಬ್ಬ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ.

ಬಳ್ಳಾರಿಯ ಅಜಿತ್‌ (42) ಎಂಬುವವರು ಶನಿವಾರ ಮಧ್ಯಾಹ್ನ ಬೀಚ್‌ಗೆ ಬಂದಿದ್ದು, ಸಮುದ್ರದಲ್ಲಿ ಮುಳುಗುತ್ತಿದ್ದರು. ಒಪ್ಪಂದ ಮುಗಿದಿದ್ದರಿಂದ ತಮ್ಮ ಸಾಮಗ್ರಿಗಳನ್ನು ಕೊಂಡೊಯ್ಯಲು ಬೀಚ್‌ಗೆ ಬಂದಿದ್ದ ಜೀವ ರಕ್ಷಕರು, ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಣೆ ಮಾಡಿದ್ದಾರೆ ಎಂದು ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು