ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಗಲಭೆ: ಬೈಕ್‌ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ- ಅಲೋಕ್ ಕುಮಾರ್

Last Updated 4 ಆಗಸ್ಟ್ 2022, 10:58 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈಗ ಇರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಯೋಚಿಸಲಾಗಿದೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಪುರುಷರ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗ ಜಾರಿಯಲ್ಲಿರುವ ನಿರ್ಬಂಧಗಳನ್ನು ಇನ್ನೂ ಕೆಲವು ದಿನ ಮುಂದುವರಿಸಲಾಗುವುದು. ಈ‌ ನಿರ್ಬಂಧಗಳಿಗೆ ವಿನಾಯಿತಿ ನೀಡಿದ ನಂತರ ಬೈಕ್‌ನಲ್ಲಿ ಪುರುಷ ಹಿಂಬದಿ ಸವಾರರ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗುವುದು. ಕೆಲವೊಮ್ಮೆ ಹಿಂಬದಿ ಸವಾರರಿಂದಲೇ ಅಪಾಯವಾಗುವ ಸಾಧ್ಯತೆ‌ ಇರುತ್ತದೆ. ಈ ಹಿಂದೆ ಅನೇಕ ಕಡೆಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. 18 ವರ್ಷದ‌ ಒಳಗಿನ ಮಕ್ಕಳು, ಹಿರಿಯ ನಾಗರಿಕರಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗುವುದು’ ಎಂದರು.

ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಳೆದ ಒಂದು ವಾರದಿಂದ ಜನರು ಶಾಂತಿಯುತವಾಗಿ ಓಡಾಡುತ್ತಿದ್ದಾರೆ. ಕಿಡಿಗೇಡಿಗಳ ಮೇಲೆಯೂ ನಾವು ಕಣ್ಗಾವಲು ಇಟ್ಟಿದ್ದೇವೆ. ಅದಕ್ಕಾಗಿಯೇ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಈ ಮೂಲಕ ಸಮಾಜಕ್ಕೂ ಧೈರ್ಯ ತುಂಬಲಾಗುತ್ತಿದೆ. ಕ್ರಿಮಿನಲ್‍ಗಳನ್ನು ಕ್ರಿಮಿನಲ್‍ಗಳನ್ನಾಗಿಯೇ ಉಪಚರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ತನಿಖೆ ಪ್ರಗತಿಯಲ್ಲಿದೆ. ಸ್ಥಳೀಯ ಜೈಲುಗಳ ಮೇಲೆಯೂ ನಿಗಾ ವಹಿಸಬೇಕಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ವಹಿಸಬೇಕಾಗಿದೆ. ಶಿರೂರಿನಿಂದ ತಲಪಾಡಿವರೆಗೆ ಪೊಲೀಸ್ ಕಣ್ಗಾವಲು ಇಟ್ಟಿರುವ ಜತೆಗೆ ಮುಖ್ಯಮಂತ್ರಿ ನಿರ್ದೇಶನದಂತೆ ಗಡಿ ಭಾಗಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೆಲವೊಂದು ಸಂಘಟನೆಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ‍ಪೊಲೀಸ್ ವ್ಯಾಪ್ತಿಯ ಗಡಿ ಪ್ರದೇಶಗಳಲ್ಲಿ 12 ಚೆಕ್‍ಪೋಸ್ಟ್ ಮಂಗಳೂರು ನಗರ ವ್ಯಾಪ್ತಿಯಲ್ಲಿ 6 ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಚೆಕ್‍ ಪೋಸ್ಟ್‌ಗಳು ಕನಿಷ್ಠ ಒಂದು ವರ್ಷ ಮುಂದುವರಿಯಲಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಮುಂದುವರಿಸುವ ಅಥವಾ ಹಿಂಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT