ಗುರುವಾರ , ಅಕ್ಟೋಬರ್ 1, 2020
20 °C
ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ

ಜಿಲ್ಲೆಯಾದ್ಯಂತ ಪೊಲೀಸ್‌ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಯೋಧ್ಯೆಯಲ್ಲಿ ಬುಧವಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಸಭೆ, ವಿಜಯೋತ್ಸವ, ಪ್ರತಿಭಟನೆ, ಮೆರವಣಿಗೆ ನಡೆಸದಂತೆ ಪೊಲೀಸ್‌ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಶ್‌ ಹಾಗೂ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಖುದ್ದಾಗಿ ಭದ್ರತಾ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದಾರೆ.

ಮಂಗಳೂರು ನಗರದ ವಿವಿಧೆಡೆ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಉಳ್ಳಾಲ, ಸುರತ್ಕಲ್‌ ಸೇರಿದಂತೆ ಹಲವು ಕಡೆಗಳಲ್ಲಿ ರಾಜ್ಯ ಮೀಸಲು, ಪೊಲೀಸ್‌ ಪಡೆ ಹಾಗೂ ನಗರ ಸಶಸ್ತ್ರ ಮೀಸಲು ಪಡೆಗಳ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಬಂಟ್ವಾಳ, ಬಿ.ಸಿ.ರೋಡ್‌, ಕಲ್ಲಡ್ಕ ಸೇರಿದಂತೆ ವಿವಿಧೆಡೆ ರಾಜ್ಯ ಮೀಸಲು ಪೊಲೀಸ್‌ ಪಡೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ಪೊಲೀಸರನ್ನು ನಿಯೋಜಿಸಲಾಗಿದೆ.

ರಾತ್ರಿಯಿಂದಲೇ ಗಸ್ತು: ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವಿಭಾಗದ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಗಸ್ತು ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಜನರ ಓಡಾಟದ ಮೇಲೆ ನಿಗಾ ಇರಿಸಲಾಗಿದೆ.

‘ಮತೀಯವಾದಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಮತ್ತು ವಿವಿಧ ಸಂಘಟನೆಗಳ ಪ್ರಮುಖರ ಮೇಲೆ ಪೊಲೀಸ್‌ ನಿಗಾ ಇರಿಸಲಾಗಿದೆ. ಮೆರವಣಿಗೆ, ಪ್ರತಿಭಟನೆ ನಡೆಸದಂತೆ ಅಂತಹ ವ್ಯಕ್ತಿಗಳಿಗೆ ತಾಕೀತು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮದ್ಯ ಮಾರಾಟ ನಿಷೇಧ
ಅಯೋಧ್ಯೆ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ 9 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು