ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಸವಾಲಾದ ‘ಪ್ರೀತಮ್’

ಅಂಗವೈಕಲ್ಯ ಮೆಟ್ಟಿನಿಂತು ಸ್ವಯಂ ಉದ್ಯೋಗದಲ್ಲಿ ಯಶಸ್ಸು
Last Updated 3 ಡಿಸೆಂಬರ್ 2021, 5:05 IST
ಅಕ್ಷರ ಗಾತ್ರ

ಮಂಗಳೂರು: ಅಂಗವೈಕಲ್ಯದ ಕಾರಣಕ್ಕೆ ಉದ್ಯೋಗ ಸಿಗದೆ ನೊಂದುಕೊಂಡಿದ್ದ ಈ ಯುವಕ, ಇದನ್ನೇ ಸವಾಲಾಗಿ ಸ್ವೀಕರಿಸಿ, ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರಿನ ಪ್ರೀತಮ್ ರೈ ಅವರಿಗೆ ಚಿಕ್ಕಂದಿನಲ್ಲೇ ಒಂದು ಕಾಲು ಊನವಾಗಿತ್ತು. ಶಾಲೆ– ಕಾಲೇಜುಗಳಲ್ಲಿ ಸ್ನೇಹಿತರು, ಶಿಕ್ಷಕರು ನೀಡಿದ ಪ್ರೋತ್ಸಾಹ ಪ್ರೀತಮ್ ಅವರೊಳಗಿದ್ದ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿತ್ತು. ಬಿ.ಕಾಂ., ಕಂಪ್ಯೂಟರ್ ಡಿಪ್ಲೊಮಾ ಪದವಿ ಪಡೆದು, ಉದ್ಯೋಗ ಅರಸಿ ಹೊರಟ ಅವರಿಗೆ, ಕಹಿ ಅನುಭವಗಳು ಬೆನ್ನುಹತ್ತಿದವು. ಮೂರ್ನಾಲ್ಕು ಕಡೆಗಳಲ್ಲಿ ಕೆಲಸ ದೊರೆತರೂ, ‘ಅಂಗವಿಕಲ’ ಅನ್ನುವ ಕಾರಣಕ್ಕೆ ಅದು ಕೈತಪ್ಪಿತು.

ನಂತರ ಪುತ್ತೂರಿನ ಕೆ.ಎಸ್. ಯಡಪಡಿತ್ತಾಯರ ಬಳಿ ಉದ್ಯೋಗಕ್ಕೆ ಸೇರಿ, ಅಲ್ಲಿ ಕಂದಾಯ ಸಂಬಂಧಿ ಕಾಗದಪತ್ರ ಸಿದ್ಧಪಡಿಸುವ ಕೆಲಸ ಕಲಿತುಕೊಂಡ ಪ್ರೀತಮ್, ಈಗ ತಾಲ್ಲೂಕು ಪಂಚಾಯಿತಿ ಸಮೀಪ ಮಳಿಗೆಯಲ್ಲಿ ಝೆರಾಕ್ಸ್ ಅಂಗಡಿ ನಡೆಸುತ್ತಿದ್ದಾರೆ. ಒಬ್ಬ ಯುವಕನಿಗೆ ಉದ್ಯೋಗ ನೀಡಿದ್ದಾರೆ.

‘ಅಂಗವಿಕಲರು ವಿದ್ಯಾಭ್ಯಾಸ ಪಡೆಯಲು ಹಿಂದೇಟು ಹಾಕಬಾರದು. ದೈಹಿಕ ನ್ಯೂನತೆ ದೇವರ ಕೊಡುಗೆ. ಅದನ್ನೇ ಸವಾಲಾಗಿ ಸ್ವೀಕರಿಸಿ, ಕುಟುಂಬಕ್ಕೆ ಭಾರವಾಗದಂತೆ ಬದುಕಬೇಕು. ಚಿಕ್ಕಂದಿನಿಂದ ಇದೇ ಕನಸು ಹೊತ್ತಿದ್ದ ನಾನು, ಈಗ ಸ್ವತಂತ್ರನಾಗಿದ್ದೇನೆ. ಇದರಿಂದ ನನ್ನ ಪಾಲಕರಿಗೂ ಸಮಾಧಾನ’ ಎನ್ನುತ್ತಾರೆ ಪ್ರೀತಮ್.

‘ಸರ್ಕಾರದ ‘ಅರಿವು ಸಿಂಚನ’ ಕಾರ್ಯಕ್ರಮದಲ್ಲಿ ತರಬೇತಿ ಪಡೆದು, ಅಂಗಡಿ ಆರಂಭಿಸುವಾಗ ನನ್ನ ಬಳಿ ಇದ್ದಿದ್ದು ಶಿಕ್ಷಣ ಮತ್ತು ಆತ್ಮವಿಶ್ವಾಸ ಇವೆರಡು ಮಾತ್ರ. ಅಂಗವಿಕಲರಿಗೆ ಸದಾ ನೆರವಾಗುವ ಶಿಕ್ಷಕ ಶಿವು ರಾಥೋಡ್ ಬೆನ್ನೆಲುಬಾಗಿ ನಿಂತರು. ಬ್ಯಾಂಕ್‌ನಲ್ಲಿ ಮಾಡಿದ ಸಾಲ ಮುಗಿಯುತ್ತ ಬಂದಿದೆ. ಎಲ್ಲಕ್ಕೂ ಹಿಂಜರಿಯುವ ಅಂಗವಿಕಲರಿಗೆ ಮತ್ತು ಪರಾವಲಂಬಿಯಾಗಿರುವ ಎಂಡೊ ಪೀಡಿತರಿಗೆ ಕೈಲಾದಷ್ಟು ಸಹಾಯ ಮಾಡುವ ಆಸೆಯಿದೆ’ ಎಂದು ಪ್ರತಿಕ್ರಿಯಿಸಿದರು.

ಅವಕಾಶ ನೀಡಿ: ‘ಸಮಾಜ ಕಟ್ಟುವಲ್ಲಿ ಅಂಗವಿಕಲರೂ ಸಮರ್ಥರಿದ್ದಾರೆ. ಅವರಿಗೆ ಸಮಾನ ಅವಕಾಶ ನೀಡಬೇಕು. ಅವಕಾಶ ದೊರೆತರೆ ಅಂಗವಿಕಲರು ಕೂಡ ಆಕಾಶದತ್ತ ಹಾರುವ ಯೋಚನೆ ಮಾಡುತ್ತಾರೆ’ ಎಂದು ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ ರಾಥೋಡ್ ಪ್ರತಿಕ್ರಿಯಿಸಿದರು.

ಅರಿವಿನ ಸಿಂಚನ ಕಾರ್ಯಕ್ರಮದಿಂದ ಹಲವರು ಪ್ರಯೋಜನ ಪಡೆದಿದ್ದರು. ಆದರೆ, ಈಗ ಈ ಕಾರ್ಯಕ್ರಮ ಸ್ಥಗಿತಗೊಂಡಿದೆ ಎಂದು ಅವರು ಬೇಸರಿಸಿದರು.

ನೇಮಕವಾಗದ ಅಧಿಕಾರಿ

ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016ರ ಕಲಂ 15ರ ಅನ್ವಯ ಅಂಗವಿಕಲರಿಗೆ ಕಾನೂನಿನಲ್ಲಿ ನೀಡಿರುವ ಸೌಲಭ್ಯದ ಬಗ್ಗೆ ಅರಿವು ಮೂಡಿಸಲು ಎಲ್ಲ ಇಲಾಖೆಗಳಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಎಂದು 2019 ಅಕ್ಟೋಬರ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈವರೆಗೂ ಯಾವ ಇಲಾಖೆಯಲ್ಲೂ ಅಧಿಕಾರಿ ನೇಮಕ ಆಗಿಲ್ಲ ಎನ್ನುತ್ತಾರೆ ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಗವಿಕಲರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ ರಾಥೋಡ್.

2011ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 28,095 ಅಂಗವಿಕಲರು ಇದ್ದಾರೆ. ಅಂಗವಿಕಲರಲ್ಲಿ ಅನೇಕರಿಗೆ ಸೌಲಭ್ಯಗಳ ಅರಿವು ಇರುವುದಿಲ್ಲ. ಅರಿವು ಮೂಡಿಸಲು ಅಧಿಕಾರಿಗಳ ನೇಮಕ ಆಗಿಲ್ಲ. ಇದೇ ರೀತಿ ಅಂಗವಿಕಲರ ಸಮಸ್ಯೆ ನಿವಾರಣೆಗೆ ಕುಂದಕೊರತೆ ಅಧಿಕಾರಿಗಳನ್ನು ನೇಮಿಸಲು 2016ರ ಅಧಿನಿಯಮ ತಿಳಿಸಿದೆ. ಆದರೆ, ಕುಂದುಕೊರತೆ ಅಧಿಕಾರಿಯೂ ಜಿಲ್ಲಾ ಮಟ್ಟದಲ್ಲಿ ಇಲ್ಲ ಎಂದು ಅವರು ತಿಳಿಸಿದರು.

‘ಸರ್ಕಾರ ಕೆಲವು ಇಲಾಖೆಗಳಲ್ಲಿ ಅರಿವು ಮೂಡಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಪ್ರಭಾರಿ ಆಯುಕ್ತ ಡಾ. ವಿ.ಮುನಿರಾಜು ಪ್ರತಿಕ್ರಿಯಿಸಿದರು.

ಕಪ್ಪುಪಟ್ಟಿ ಧರಿಸಿ ದಿನಾಚರಣೆ

ಸುಪ್ರೀಂ ಕೋರ್ಟ್ ಆದೇಶದಂತೆ ಅಂಗವಿಕಲ ನೌಕರರಿಗೆ ಸರ್ಕಾರ ಬಡ್ತಿ ನೀಡಿಲ್ಲ. ಸರ್ಕಾರಿ ಕರ್ತವ್ಯದಲ್ಲಿರುವಾಗ ಅಂಗವಿಕಲರಾದರೆ ವಿಶೇಷ ದುರ್ಬಲತೆ, ಸೇವಾ ಸೌಲಭ್ಯ ನೀಡುತ್ತಿಲ್ಲ. ಅಂಗವಿಕರಿಗೆ ಸಂಬಂಧಿಸಿ ಕಡತಗಳು ಸರ್ಕಾರಿ ಕಚೇರಿಗಳಲ್ಲಿ ತ್ವರಿತವಾಗಿ ವಿಲೇವಾರಿ ಆಗುತ್ತಿಲ್ಲ. ಸರ್ಕಾರ ಅಂಗವಿಕಲರಾಗಿ ಸ್ಥಾಪಿಸಿರುವ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿಲ್ಲ. ಇವೆಲ್ಲ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ, ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಗವಿಕಲರ ಸಂಘದ ಸದಸ್ಯರು ರಾಜ್ಯದಾದ್ಯಂತ ಕಪ್ಪುಪಟ್ಟಿ ಧರಿಸಿ, ಶುಕ್ರವಾರ (ಡಿ.3) ಅಂಗವಿಕಲರ ದಿನಾಚರಣೆ ಆಚರಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT