ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯದ ಚಾಲನೆಗೆ ಬೇಕು ನಿಗಾ: ಖಾಸಗಿ ಬಸ್‌ಗಳ ಅತಿವೇಗದ ಸಂಚಾರಕ್ಕೆ ಆಕ್ರೋಶ

ಖಾಸಗಿ ಬಸ್‌ಗಳ ಅತಿವೇಗದ ಸಂಚಾರಕ್ಕೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ
Last Updated 31 ಮಾರ್ಚ್ 2023, 6:06 IST
ಅಕ್ಷರ ಗಾತ್ರ

ಮಂಗಳೂರು: ಸದಾ ವಾಹನ ದಟ್ಟಣೆ ಇರುವ ನಗರದ ಬೆಂದೂರ್‌ವೆಲ್‌ ಜಂಕ್ಷನ್‌ನಲ್ಲಿ ಒಂದು ವಾರದೊಳಗೆ ನಡೆದ ಎರಡು ಅಪಘಾತಗಳಲ್ಲಿ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಖಾಸಗಿ ಬಸ್‌ಗಳ ಚಾಲಕರ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಗಳು ಮರುಕಳಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾ.24ರಂದು ತಾಯಿ ಮತ್ತು ಮಗ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಗುರುವಾರ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ವೇಗದ ಚಾಲನೆ, ಓವರ್‌ಟೇಕ್ ಮಾಡುವ ಭರಾಟೆ, ಕರ್ಕಶ ಹಾರನ್ ಸದ್ದು ಇಂತಹ ವಿಷಯಗಳು ಮತ್ತೆ ಚರ್ಚೆಗೆ ಬಂದಿವೆ.

ಖಾಸಗಿ ಬಸ್‌ನವರು ಹೆಚ್ಚು ಹಣ ಗಳಿಸಲು ಕೇರ್‌ಲೆಸ್‌ ಆಗಿ ಚಾಲನೆ ಮಾಡುತ್ತಾರೆ. ಮಕ್ಕಳು ಬಸ್ ಹತ್ತುವಾಗ ಪುರುಸೊತ್ತಿಲ್ಲದೆ, ಬಸ್ ಹೊರಡಿಸುತ್ತಾರೆ. ಐದಾರು ತಿಂಗಳುಗಳಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ’ ಎಂದು ಅವಿನಾಶ್ ರಾವ್ ಎಂಬುವವರು ಫೇಸ್‌ಬುಕ್‌ ಗೋಡೆಯಲ್ಲಿ ಬರೆದುಕೊಂಡಿದ್ದಾರೆ.

‘ಖಾಸಗಿ ಬಸ್ ಸಂಚಾರ ರದ್ದುಗೊಳಿಸಿ, ಸರ್ಕಾರಿ ಬಸ್ ಓಡಿಸಬೇಕು. ಆಗ ಇವರಿಗೆ ಅರ್ಥವಾಗುತ್ತದೆ’ ಎಂದು ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ.

ಆಸ್ಪತ್ರೆ ಎದುರಲ್ಲೂ ಹಾರನ್: ಆಸ್ಪತ್ರೆಯ ಎದುರು ವಾಹನಗಳು ಹಾರನ್ ಹಾಕುವಂತಿಲ್ಲ ಎಂಬ ನಿಯಮ ಇದ್ದರೂ, ಖಾಸಗಿ ಬಸ್‌ಗಳು, ಎಲ್ಲ ನಿಯಮಗಳನ್ನು ಉಲ್ಲಂಘಿಸಿ, ಒಂದೇ ಸವನೆ ಹಾರನ್ ಹಾಕುತ್ತ ಓಡುತ್ತವೆ ಎಂದು ಆರೋಪಿಸುತ್ತಾರೆ ಜನರು.

ಬಸ್ ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪಲು ನೀಡಿರುವ ಸಮಯ ಸುಮಾರು ಮೂರು ದಶಕಗಳಿಂದ ಪರಿಷ್ಕರಣೆಯಾಗಿಲ್ಲ. ಈಗ ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ ಹೆಚ್ಚಳವಾಗಿದ್ದು, ಕಾಲಕಾಲಕ್ಕೆ ಇದನ್ನು ಪರಿಷ್ಕರಿಸಬೇಕು. ಸಮಯ ಕವರ್ ಮಾಡಲು ಚಾಲಕರು ಅತಿವೇಗದಲ್ಲಿ ಚಾಲನೆ ಮಾಡುತ್ತಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಸ್ ಮಾಲೀಕರೊಬ್ಬರು.

ಸ್ಮಾರ್ಟ್‌ ಸಿಟಿ ಎಂದು ಹೇಳಿಕೊಳ್ಳುವ ನಗರದಲ್ಲಿ ಸರ್ಕಾರದ ನಿಯಮ ಇದ್ದರೂ, ಬಸ್‌ಗಳಿಗೆ ಜಿಪಿಎಸ್ ಅಳವಡಿಸುವ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಜಿಪಿಎಸ್ ಹಾಕಿದರೆ, ಬಸ್‌ನ ವೇಗ ನಿಯಂತ್ರಣ, ವೇಳಾಪಟ್ಟಿ ಎಲ್ಲದರ ಮೇಲೆ ನಿಗಾ ಇಡಲು ಸುಲಭವಾಗುತ್ತದೆ. ಚಾಲಕನಿಗೆ ಕೂಡ ಜವಾಬ್ದಾರಿ ಹೆಚ್ಚುತ್ತದೆ. ಹಿಂದೊಮ್ಮೆ ಜಿಲ್ಲಾಡಳಿತ ಇದನ್ನು ಕಡ್ಡಾಯಗೊಳಿಸಿತ್ತು. ಆದರೆ, ಈಗ ಯಾವ ಬಸ್‌ಗಳಲ್ಲೂ ಜಿಪಿಎಸ್ ಕಾಣುವುದಿಲ್ಲ ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯಪಟ್ಟರು.

‘ನಿರ್ಲಕ್ಷ್ಯದ ಚಾಲನೆಗೆ ಗಂಭೀರ ಶಿಕ್ಷೆ ಇರಬೇಕು. ಆಗ ಚಾಲಕರು ಹೆಚ್ಚು ಎಚ್ಚರವಹಿಸಿ ಚಾಲನೆ ಮಾಡುತ್ತಾರೆ. ಅಲ್ಲದೆ, ಪೊಲೀಸರು ನೋ ಪಾರ್ಕಿಂಗ್ ಸ್ಥಳಗಳು, ಬಸ್‌ ನಿಲುಗಡೆಯ ಸ್ಥಳಗಳ ಮೇಲೆ ಹೆಚ್ಚು ನಿಗಾವಹಿಸಿದರೆ ಉತ್ತಮ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದರು.

‘ಕಟ್ಟುನಿಟ್ಟಿನ ಸಂಚಾರ ನಿಯಮ ಜಾರಿಯಾಗಲಿ’

‘ಇಲ್ಲಿನ ಸಂಚಾರ ವ್ಯವಸ್ಥೆ ಸಮರ್ಪಕವಾಗಿಲ್ಲ. ಟ್ರಾಫಿಕ್ ಇರುವಲ್ಲಿ ಸಿಗ್ನಲ್ ಅಳವಡಿಸಬಹುದು. ಹೆಚ್ಚು ಅಪಘಾತ ನಡೆಸುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಹೀಗೆ ನಿಯೋಜಿಸಿರುವ ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಲ್ಲದೆ, ಸಂಚಾರ ನಿರ್ವಹಣೆ ಮಾಡಬೇಕು. ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುತ್ತಾರೆ. ಆದರೆ, ಬಸ್‌ಗಳ ಮೇಲೆ ಹೆಚ್ಚು ಪ್ರಕರಣ ದಾಖಲಿಸುವುದಿಲ್ಲ. ಟ್ರಾಫಿಕ್ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಕ್ರಮದ ಕೊರತೆಯಿಂದ ಇಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚು ಘಟಿಸುತ್ತವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮದ ಬಗ್ಗೆ ಯೋಚಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪ್ರತಿಕ್ರಿಯಿಸಿದರು.

‘ತಜ್ಞರ ಜತೆ ಚರ್ಚಿಸಿ ಮುಂದಿನ ಕ್ರಮ’

ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಉತ್ತಮ ಸೇವೆ ನೀಡುತ್ತಿವೆ. ಪ್ರತಿ ವ್ಯಕ್ತಿಯ ಜೀವ ಅಮೂಲ್ಯವಾಗಿದ್ದು, ಜೀವಕ್ಕೆ ಬೆಲೆ ಕೊಡುವುದು ಪ್ರತಿ ಚಾಲಕನ ಕರ್ತವ್ಯವಾಗಿದೆ. ಕೆಲವೊಮ್ಮೆ ಅವಘಡಗಳು ಸಂಭವಿಸಿದ್ದರ ಬಗ್ಗೆ ಬೇಸರವಿದೆ. ಇಕ್ಕಟ್ಟಾದ ಪಾರ್ಕಿಂಗ್ ಸ್ಥಳಗಳು, ಅಲ್ಲಲ್ಲಿ ರಸ್ತೆ ಬದಿಯಲ್ಲಿ ನಡೆಯುವ ಕಾಮಗಾರಿಗಳು, ಸಂಚಾರ ವ್ಯವಸ್ಥೆ ಬಗ್ಗೆಯೂ ಯೋಚಿಸಬೇಕಾಗಿದೆ. ಬಸ್ ಚಾಲಕರಿಗೆ ತರಬೇತಿ ಆಯೋಜಿಸಿ, ಪಾಠ ಮಾಡಲಾಗಿದೆ. ಇನ್ನೊಮ್ಮೆ ತಜ್ಞರ ಜತೆ ಚರ್ಚಿಸಿ, ವ್ಯವಸ್ಥೆ ಸುಧಾರಣೆಗೆ ಯತ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT