ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವರು ಶಾಲೆ ಉಳಿಸಲಿ: ಪ್ರೊ.ಬಿ.ಎ.ವಿವೇಕ ರೈ

ಕಲಿತದ್ದು, ಕಲಿಸಿದ್ದು ಕೃತಿ ಬಿಡುಗಡೆಯಲ್ಲಿ
Last Updated 15 ಡಿಸೆಂಬರ್ 2019, 13:31 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿಯ ಜನಜೀವನವನ್ನು ಬೆಳೆಸಿ, ಅಭಿವೃದ್ದಿಗೆ ಕೊಡುಗೆ ನೀಡಿದ ಇಲ್ಲಿನ ಬಹುತೇಕ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಉಳ್ಳವರು ಈ ಶಾಲೆಗಳನ್ನು ಉಳಿಸಲಿ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಮನವಿ ಮಾಡಿದರು.

ನಗರದ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ತಮ್ಮ ಕೃತಿ ‘ಕಲಿತದ್ದು ಕಲಿಸಿದ್ದು’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಐದು ದಶಕಗಳ ಹಿಂದೆ ಹಿರಿಯರು ಸ್ವಂತ ಹಣ ಹಾಕಿ ಸರ್ಕಾರಿ ಹಾಗೂ ಇತರ ಶಾಲೆಗಳನ್ನು ಕಟ್ಟಿ ಬೆಳೆಸಿದರು. ಇದರಿಂದ ಜಿಲ್ಲೆ ಅಭಿವೃದ್ಧಿ ಪರ್ವ ಕಂಡಿತು. ಆದರೆ, ಈಗ ಅವು ಮುಚ್ಚುತ್ತಿವೆ’ ಎಂದರು.

‘ಅಂದು 8 ತರಗತಿಗಳಿಗೆ ಕನಿಷ್ಠ 9 ಶಿಕ್ಷಕರು ಇದ್ದರೆ, ಇಂದು 8 ತರಗತಿಗಳಿಗೆ 2ರಿಂದ 3 ಶಿಕ್ಷಕರಿದ್ದಾರೆ. ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮೂಲಕ ಅಣೆಕಟ್ಟೆಯ ಬಾಗಿಲು ತೆರೆದಿದೆ’ ಎಂದು ಟೀಕಿಸಿದರು.

‘ಶಿಕ್ಷಣ ಎಂಬುದು ಜ್ಞಾನದ ದ್ಯುತಿ ಸಂಶ್ಲೇಷಣಾ ಕ್ರಿಯೆ. ಕಲಿಯುವುದು, ಕಲಿಸುವುದು ಹಾಗೂ ಸಂಶೋಧನೆಯು ಶಿಕ್ಷಣದ ಬೆಳವಣಿಗೆಯ ಭಾಗವಾಗಿದೆ. ಕಲಿಸುವುದರಿಂದ ಜ್ಞಾನ ವಿಸ್ತಾರ ಹೊಂದುತ್ತದೆ. ಅಂತಹ ಓದುವಿಕೆಗೆ ಪ್ರೇರಣೆ ನೀಡುವ ವಾತಾವರಣವು ಅಂದಿನ ಪುತ್ತೂರು ಬೋರ್ಡ್‌ ಹೈಸ್ಕೂಲ್ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿತ್ತು. ಶಿವರಾಮ ಕಾರಂತರ ಆದಿಯಾಗಿ ಮೇರುವ್ಯಕ್ತಿಗಗಳೇ ನಮಗೆ ತರಬೇತಿ ನೀಡಿದ್ದರು’ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಪಿ.ಈಶ್ವರ ಭಟ್ ಸ್ಮರಿಸಿಕೊಂಡರು.

ಹಳ್ಳಿಗಳೂ ಛಿದ್ರ:‘ನಾಲ್ಕೈದು ದಶಕಗಳ ಹಿಂದಿನ ಕರಾವಳಿಯು ಈಗಿಲ್ಲ. ಅಂದು ಧರ್ಮವನ್ನು ಬಿಂಬಿಸುವ ಬಣ್ಣದ ಧ್ವಜ– ಪತಾಕೆಗಳು ಹಾರಾಡುತ್ತಿರಲಿಲ್ಲ. ಸಾಮರಸ್ಯ ನೆಲೆಸಿತ್ತು. ಆದರೆ, ಧರ್ಮ ರಾಜಕಾರಣವು ನಮ್ಮ ಹಳ್ಳಿ ಹಳ್ಳಿಯನ್ನೂ ಛಿದ್ರಗೊಳಿಸುತ್ತಿದೆ’ ಎಂದು ವಿಷಾದಿಸಿದರು.

‘ಇಂದು ಅಧ್ಯಾಪನ ವೃತ್ತಿಯೂ ಅಪಮೌಲ್ಯಗೊಂಡಿದೆ. ತಾವು, ಸಂಸ್ಥೆ, ವಿದ್ಯಾರ್ಥಿಗಳು ಬೇರೆಯಲ್ಲ ಎಂಬ ಭಾವನೆ ದೂರವಾಗುತ್ತಿದೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ, ನಿವೃತ್ತ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ಗೋಪಾಲಕೃಷ್ಣ ಪುತ್ತೂರು, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ, ಶಶಿರಾಜ್‌ ಕಾವೂರು, ಡಾ.ಆರ್.ನರಸಿಂಹ ಮೂರ್ತಿ ಇದ್ದರು.

ಕಲಿಸಿದವರಿಗೆ ಗೌರವ:ತಮಗೆ ಕಲಿಸಿದ ‘ಶಾಲೆ’ಗಳನ್ನು ವಿವೇಕ ರೈ ಗೌರವಿಸಿದರು. ಪುಣಚ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಣಿಲ ರಾಮಕೃಷ್ಣ ಶಾಸ್ತ್ರಿ ಪರವಾಗಿ ಪುತ್ರ ಹರ್ಷ ಶಾಸ್ತ್ರಿ, ಬೋರ್ಡ್‌ ಹೈಸ್ಕೂಲ್ ಮುಖ್ಯೋಪಾಧ್ಯಾಯ ಎಂ.ಅಣ್ಣಪ್ಪ ಅವರ ಮಗ ರತನ್‌ ಕುಮಾರ್ ಕೆ. ಪುತ್ತೂರು, ಪುತ್ತೂರು ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಪರವಾಗಿ ಪ್ರೊ.ಲಿಯೋ ನೊರೊನ್ಹಾ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಪಿ.ರಾಮಚಂದ್ರ ಅವರ ಪರವಾಗಿ ಪುತ್ರ ಎಸ್.ಪಿ.ರಾಮಚಂದ್ರ ಅವರನ್ನು ಗೌರವಿಸಲಾಯಿತು.

ಮನತಟ್ಟಿದ ಮಾರಪ್ಪ ಶೆಟ್ಟಿ ಮಾತು: ಪ್ರೊಫೆಸರ್, ಸಾಹಿತಿಗಳೇ ಸೇರಿದ್ದ ಸಮಾರಂಭದಲ್ಲಿ ಎಲ್ಲ ಮನ ಮುಟ್ಟಿದ್ದು, ವಿವೇಕ ರೈ ಶಾಲಾ ಸಹಪಾಠಿ, ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ ಅವರ ಮಾತುಗಳು.

‘ಇಂದಿನ ಸ್ವಚ್ಛ ಭಾರತ ಆಂದೋಲನವು ನಮಗೆ ಹೊಸದಲ್ಲ. ನಮ್ಮ ಸರ್ಕಾರಿ ಶಾಲೆಯಲ್ಲಿ 60 ಅಂಕ ತೆಗೆದ ಸಾಮಾನ್ಯ ಮನೆತನದ ನಾನೂ, 100 ಅಂಕ ತೆಗೆಯುತ್ತಿದ್ದ ದೊಡ್ಡ ಮನೆತನದ ವಿವೇಕನೂ(ರೈ) ಬೆಳಿಗ್ಗೆ ಕಸ ಹೆಕ್ಕಲೇ ಬೇಕಾಗಿತ್ತು. ಗಿಡಕ್ಕೆ ನೀರು ಹಾಕಲೇಬೇಕಿತ್ತು. ಭೇದವಿರಲಿಲ್ಲ’ ಎಂದರು.

‘ಹಲವರು ಓದಿ, ಸಾಧನೆ ಮಾಡಿ ಸರಸ್ವತಿ, ಲಕ್ಷ್ಮೀಯನ್ನು ಒಲಿಸಿಕೊಂಡಿದ್ದಾರೆ. ಆದರೆ, ನೆಮ್ಮದಿ ಮಾತ್ರ ನಮ್ಮ ಬಡ ಕೃಷಿಕರ ಮನೆಯಲ್ಲಿಯೇ ಉಳಿದುಕೊಂಡಿದೆ. ಹಾಗಾಗಿ ನಮಗೆ ಹಂಗುಗಳಿಲ್ಲ’ ಎಂಬಿತ್ಯಾದಿ ಮಾತುಗಳನ್ನಾಡಿದರು.

ಪುತ್ತೂರು ಫಿಲೋಮಿನಾಕ್ಕೆ ಶ್ಲಾಘನೆಯ ಸುರಿಮಳೆ:‘ಪುತ್ತೂರು ಫಿಲೋಮಿನಾ ಕಾಲೇಜು ಜಾತಿ–ಧರ್ಮ, ಬಡವ–ಬಲ್ಲಿದ ಭೇದಗಳು, ಡೊನೇಷನ್‌ ಹಾವಳಿ ರಹಿತ ಶಿಕ್ಷಣ ನೀಡುತ್ತಾ ಬಂದ ಕಾರಣ, ಗ್ರಾಮೀಣ ಭಾಗದಿಂದ ಸಾಧಕರು ಬರಲು ಸಾಧ್ಯವಾಗಿದೆ’ ಎಂದು ಪ್ರೊ.ಬಿ.ಎ.ವಿವೇಕ ರೈ ಕೃತಜ್ಞತೆ ವ್ಯಕ್ತಪಡಿಸಿದರು.

‘ಫಿಲೋಮಿನಾ ಕಾಲೇಜು ಜಿಲ್ಲೆಗೆ ದೇವಸ್ಥಾನ ಇದ್ದಂತೆ’ ಎಂದು ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ ನಮಿಸಿದರು.

ಕಾಲೇಜು ಪ್ರಾಂಶುಪಾಲ ಲಿಯೋ ನೊರೊನ್ಹಾ ಮಾತನಾಡಿ, ‘ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರುಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಕುಲಪತಿಗಳು, ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ಘಟಾನುಘಟಿ ಹಳೇ ವಿದ್ಯಾರ್ಥಿ ಬಳಗವನ್ನು ಕಾಲೇಜುಹೊಂದಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT