ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಂಜಸ ಕ್ರಮ ನಿಲ್ಲಿಸದಿದ್ದರೆ ಪ್ರತಿಭಟನೆ: ವಿಶ್ವಹಿಂದೂ ಪರಿಷತ್‌, ಬಜರಂಗದಳ

ಹಿಂದೂ ಸಂಘಟನೆ ಕಾರ್ಯಕರ್ತರ ಗಡೀಪಾರು ಆದೇಶಕ್ಕೆ ವಿರೋಧ
Published 5 ಏಪ್ರಿಲ್ 2024, 6:31 IST
Last Updated 5 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ಪುತ್ತೂರು: ‘ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಇಬ್ಬರಿಗೆ ಗಡೀಪಾರು ಆದೇಶ ಹಾಗೂ ಇನ್ನೊಬ್ಬರ ಮೇಲೆ ಗೂಂಡಾ ಕಾಯ್ದೆ ಹಾಕಿರುವ ಸರ್ಕಾರದ ಕ್ರಮ ಖಂಡನೀಯ. ಇಂಥ ಕ್ರಮ ನಿಲ್ಲಿಸದಿದ್ದರೆ ರಸ್ತೆಗಳಲ್ಲಿ ಕುಳಿತು ಪ್ರತಿಭಟನೆ ನಡೆಸಲಾಗುವುದು. ಪೊಲೀಸ್ ಇಲಾಖೆಯ ಮುಂಭಾಗ ಅಹೋರಾತ್ರಿ ಉಪವಾಸ ಮಾಡಲಾಗುವುದು’ ಎಂದು ವಿಶ್ವಹಿಂದೂ ಪರಿಷತ್‌, ಬಜರಂಗದಳದ ಮುಖಂಡರು ಎಚ್ಚರಿಸಿದ್ದಾರೆ.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ, ‘ಈ ಹಿಂದೆ ಅಮಾಯಕ ಹಿಂದೂ ಕಾರ್ಯಕರ್ತರ ಗಡೀಪಾರು ಯತ್ನದ ವಿರುದ್ಧ ನ್ಯಾಯಾಲಯದ ಮೂಲಕ ಪ್ರಶ್ನಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಸರ್ಕಾರಕ್ಕೆ ಮುಖಭಂಗವಾಗಿದೆ. ಈಗ ಮತ್ತೆ ಹಿಂದೂ ವಿರೋಧಿ ಕ್ರಮಕ್ಕೆ ಮುಂದಾಗಿದ್ದು, ಹಿಂದೂ ಸಮಾಜದ ಪ್ರತಿರೋಧ ಎದುರಾಗುವ ಮೊದಲು ಎಚ್ಚೆತ್ತುಕೊಳ್ಳಿ’ ಎಂದರು.

‘ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಉಪ್ಪಿನಂಗಡಿಯ ಜಯರಾಮ ಅವರಿಗೆ ಗಡೀಪಾರು ಆದೇಶ, ಮಂಗಳೂರಿನ ಜಯಪ್ರಕಾಶ್ ಎಂಬುವರ ಮೇಲೆ ಗೂಂಡಾ ಕಾಯ್ದೆ ಹಾಕಲು ಆದೇಶಿಸಲಾಗಿದೆ. ಅವರ ಮೇಲೆ ಯಾವುದೇ ಗಂಭೀರ ಪ್ರಕರಣಗಳಿಲ್ಲ. ಹಿಂದೂ ಸಮಾಜಕ್ಕಾಗಿ ಶ್ರಮಿಸುವ ವ್ಯಕ್ತಿಗಳನ್ನು ಸರ್ಕಾರ, ಇಲಾಖೆಯೇ ಗೂಂಡಾಗಳನ್ನಾಗಿ ಮಾಡುವ ಹುನ್ನಾರವಿದು’ ಎಂದು ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದರು.

‘ಕಾನೂನು ವೈಫಲ್ಯದಿಂದ ನಿರಂತರ ಗೋಹತ್ಯೆ, ಸಾಗಾಟ ಪ್ರಕರಣಗಳು ನಡೆಯುತ್ತಿವೆ. ಕಬಕ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸರು ಅವರ ನಿಜವಾದ ಕರ್ತವ್ಯ ನಿರ್ವಹಿಸಲಿ. ನಾವು ಮತ್ತೆ ಮತ್ತೆ ಮನವಿ ಮಾಡಲು ಹೋಗುವುದಿಲ್ಲ’ ಎಂದರು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ್ ಬಿ.ಎಸ್., ಬಜರಂಗದಳ ಪುತ್ತೂರು ಪ್ರಖಂಡದ ಜಯಂತ್ ಕುಂಜೂರುಪಂಜ, ವಕೀಲ ಮಾಧವ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT