ಭಾನುವಾರ, ಜುಲೈ 25, 2021
22 °C
ದ್ವಿತೀಯ ಪಿಯು ಫಲಿತಾಂಶ: ಉಡುಪಿಗೆ ಸಮನಾದ ಸಾಧನೆ

2 ನೇ ಸ್ಥಾನ ಕಾಯ್ದುಕೊಂಡ ದಕ್ಷಿಣ ಕನ್ನಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿಯೂ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಪ್ರಥಮ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆಗೆ (ಶೇ 90.71) ಸಮನಾದ ಸಾಧನೆಯನ್ನು ಮಾಡಿದೆ.

ಕಳೆದ ಬಾರಿ ಶೇ 90.91 ರಷ್ಟು ಫಲಿತಾಂಶ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ, ಈ ಬಾರಿ ಶೇ 0.20 ರಷ್ಟು ಫಲಿತಾಂಶ ಕಡಿಮೆಯಾಗಿದ್ದರೂ, ಅದೇ ಸ್ಥಾನವನ್ನು ಕಾಯ್ದುಕೊಂಡಿದೆ. ಜಿಲ್ಲೆಯ ಪುನರಾವರ್ತಿತ ಹಾಗೂ ಹೊಸ ವಿದ್ಯಾರ್ಥಿಗಳು ಸೇರಿ ಒಟ್ಟು 34,287 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 29,494 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆದರೆ, ಹೊಸ ವಿದ್ಯಾರ್ಥಿಗಳಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 27,970 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 90.71 ರಷ್ಟು ಫಲಿತಾಂಶ ದಾಖಲಾಗಿದೆ.

ವಿಜ್ಞಾನ ವಿದ್ಯಾರ್ಥಿಗಳ ಪ್ರಾಬಲ್ಯ:

ವಿಜ್ಞಾನ ವಿಭಾಗದಲ್ಲಿ ಶೇ 95.59, ವಾಣಿಜ್ಯ ವಿಭಾಗದಲ್ಲಿ ಶೇ 91.06 ಹಾಗೂ ಕಲಾ ವಿಭಾಗದಲ್ಲಿ ಶೇ 71.74 ಫಲಿತಾಂಶವನ್ನು ಪಡೆದಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಪ್ರಾಬಲ್ಯ ಮೆರೆದಿದ್ದಾರೆ.

ಪರೀಕ್ಷೆ ಬರೆದಿದ್ದ ವಿಜ್ಞಾನ ವಿಭಾಗದ ಒಟ್ಟು 13,078 ವಿದ್ಯಾರ್ಥಿಗಳ ಪೈಕಿ 12,501 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 14,134 ವಿದ್ಯಾರ್ಥಿಗಳ ಪೈಕಿ, 12,870 ಮಂದಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 3,623 ಮಂದಿಯ ಪೈಕಿ 2,599 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಒಟ್ಟು 17,189 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 15,561 ಬಾಲಕಿಯರು ತೇರ್ಗಡೆಯಾಗುವ ಮೂಲಕ ಶೇ 90.53 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಬಾಲಕರ ವಿಭಾಗದಲ್ಲಿ 17,098 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 13,933 ಮಂದಿ ಉತ್ತೀರ್ಣರಾಗುವ ಮೂಲಕ ಶೇ 81.49 ರಷ್ಟು ಫಲಿತಾಂಶ ಪಡೆದಿದ್ದಾರೆ.

ಆಂಗ್ಲಮಾಧ್ಯಮದಲ್ಲಿ ಪರೀಕ್ಷೆ ಬರೆದ 28,166 ವಿದ್ಯಾರ್ಥಿಗಳ ಪೈಕಿ, 25,401 ಮಂದಿ ತೇರ್ಗಡೆಯಾಗಿದ್ದು, ಶೇ 90.18 ರಷ್ಟು ಫಲಿತಾಂಶ ಬಂದಿದೆ. ಇನ್ನು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 6,121 ಮಂದಿಯಲ್ಲಿ 4,093 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದ ಶೇ 66.87 ರಷ್ಟು ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ‘ಅಪೂರ್ವ’ ಸಾಧನೆ

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 99 ರಷ್ಟು ಅಂಕ ಪಡೆದಿರುವ ಮಂಗಳೂರು ನಗರದ ವಿಕಾಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಪೂರ್ವ ಎಂ., ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆರ್ಥಿಕ ಸಲಹೆಗಾರ್ತಿಯಾಗುವ ಆಸೆ ಹೊಂದಿರುವ ಅಪೂರ್ವ, ವಾಣಿಜ್ಯ ವಿಭಾಗದಲ್ಲಿ ಪದವಿ ಮಾಡಿ, ಲೆಕ್ಕಪರಿಶೋಧನೆಯಲ್ಲಿ ಉನ್ನತ ವ್ಯಾಸಂಗ ಮಾಡುವ ಗುರಿ ಹೊಂದಿದ್ದಾರೆ.

‘ನಿರಂತರ ಓದು, ಏಕಾಗ್ರತೆಗಳಿಂದ ಅಧ್ಯಯನ ಮಾಡಿದ್ದರಿಂದ ಈ ಫಲಿತಾಂಶ ಸಾಧ್ಯವಾಗಿದೆ. ರಜೆಯ ದಿನಗಳಲ್ಲಿ ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡುವುದರಲ್ಲಿ ನಿರತಳಾಗಿದ್ದೆ. ಈಗ ಬಂದಿರುವ ಫಲಿತಾಂಶ ನಿಜಕ್ಕೂ ಸಂತಸ ತಂದಿದೆ’ ಎಂದು ಅಪೂರ್ವ ಹೇಳಿದ್ದಾರೆ.

ಗಣಿತ, ಅಕೌಂಟನ್ಸಿ, ಬ್ಯುಸಿನೆಸ್ ಸ್ಟಡೀಸ್, ಸಂಖ್ಯಾಶಾಸ್ತ್ರ, ಹಿಂದಿ ಮತ್ತು ಇಂಗ್ಲಿಷ್‌ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದ ಅಪೂರ್ವ, ಒಟ್ಟು 600 ಅಂಕಗಳ ಪೈಕಿ 594 ಅಂಕ ಪಡೆದಿದ್ದಾರೆ. ಈಕೆ ಮೋಹನ್‌ ಪೂಜಾರಿ ಹಾಗೂ ಪ್ರತಿಮಾ ಪೂಜಾರಿ ದಂಪತಿಯ ಪುತ್ರಿ.

ಅದಿತಿ, ಪೃಥ್ವಿ ಸಾಧನೆ

ನಗರದ ಕೊಡಿಯಾಲ್‌ಬೈಲ್‌ನ ಶಾರದಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅದಿತಿ ಪ್ರಭು ಕೆ. ಪಿ. 600 ಅಂಕಗಳಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ.

ಇದೇ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೃಥ್ವಿ ಎನ್. ಹೆಬ್ಬಾರ್ 600ರಲ್ಲಿ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.