ಮಂಗಳವಾರ, ಸೆಪ್ಟೆಂಬರ್ 21, 2021
22 °C
ವಸತಿ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಕ್ರಮಸಂಖ್ಯೆ ನೀಡಿದ್ದಕ್ಕೆ ಆಕ್ಷೇಪ

ಪುತ್ತೂರು: ಉನ್ನತ ಮಟ್ಟದ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ರಾಜಕಾಲುವೆಯ ಬಳಿ ರಸ್ತೆ ಅಂಚು ಬಿಡದ, ವಾಹನ ನಿಲುಗಡೆ ಇಲ್ಲದ ಹಾಗೂ ರಾಜಕಾಲುವೆ ಬಫರ್ ಝೋನ್‌ನಲ್ಲಿರುವ ವಸತಿ ಸಂಕೀರ್ಣ ಮತ್ತು ವಾಣಿಜ್ಯ ಸಂಕೀರ್ಣವೊಂದಕ್ಕೆ ತುರಾತುರಿಯಲ್ಲಿ ಕ್ರಮ ಸಂಖ್ಯೆ ನೀಡಿರುವುದನ್ನು ಆಕ್ಷೇಪಿಸಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯ ಭಾಮಿ ಅಶೋಕ್ ಶೆಣೈ ವಿಷಯ ಪ್ರಸ್ತಾಪಿಸಿ, ‘ಪುತ್ತೂರು –ಮಂಗಳೂರು ಮುಖ್ಯ ರಸ್ತೆಯ ರಾಜಕಾಲುವೆಯ ಬಳಿಯ ವಸತಿ ಸಂಕೀರ್ಣದ ಸುತ್ತ ಅಗ್ನಿಶಾಮಕದಳದ ವಾಹನ ಹೋಗುವ ವ್ಯವಸ್ಥೆ ಇಲ್ಲ. ಸಂಕೀರ್ಣದಲ್ಲಿ 87 ಮನೆಗಳಿದ್ದರೂ ರಸ್ತೆ ಕಿರಿದಾಗಿದೆ. ಆದರೆ, ತುರಾತುರಿಯಲ್ಲಿ ಬಾಗಿಲು ಸಂಖ್ಯೆ ಕೊಡಲಾಗಿದೆ. ಅದರ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣ ರಾಜಕಾಲುವೆಯ ಬಫರ್ ಝೋನ್‌ನಲ್ಲಿ ಇರುವುದಲ್ಲದೆ ವಾಹನ ನಿಲುಗಡೆ ವ್ಯವಸ್ಥೆ, ರಸ್ತೆ ಅಂಚು ಕೂಡ ಇಲ್ಲ. ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಯಾವ ಕಾನೂನು ಇಲ್ಲವೇ’ ಎಂದು ಪ್ರಶ್ನಿಸಿದರು.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಪೌರಾಯುಕ್ತರ ಅಧೀನದಲ್ಲಿ ತನಿಖೆಗೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕ್ಷೇತ್ರ ಕಾರ್ಯ ಇದ್ದರೂ ತುರಾತುರಿಯಲ್ಲಿ ಖಾತೆ ಆಗಿದೆ. ಇದಕ್ಕೆ ಯಾವ ಆಧಾರವೂ ಇಲ್ಲ ಎಂದರು.

ಜೀವಂಧರ್ ಜೈನ್ ಉತ್ತರಿಸಿ, ‘ಈ ವಿಚಾರವನ್ನು ನಗರಸಭೆ ಗಂಭೀರವಾಗಿ ಪರಿಗಣಿಸುತ್ತದೆ. ಒಂದು ವಾರದೊಳಗೆ ಲಿಖಿತ ವರದಿ ನೀಡುವಂತೆ ಪೌರಾಯುಕ್ತರಿಗೆ ಸೂಚಿಸಲಾಗಿದೆ’ ಎಂದರು. ನಗರಸಭೆಯಿಂದ ಸಮಿತಿ ರಚನೆ ಮಾಡಿ ತನಿಖೆ ಮಾಡಲು ನಿರ್ಣಯಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿರುವ ಇ– ಶೌಚಾಲಯ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿದೆ. ಬೊಳುವಾರಿನಲ್ಲಿ ಇರುವ ಇ –ಶೌಚಾಲಯ ದುರಸ್ತಿ ಮಾಡಬೇಕು ಎಂದು ಸದಸ್ಯ ಸಂತೋಷ್ ಬೊಳುವಾರು ಆಗ್ರಹಿಸಿದರು. ಉತ್ತರಿಸಿದ ಪೌರಾಯುಕ್ತ ಮಧು ಎಸ್. ಮನೋಹರ್, ‘ಇ ಶೌಚಾಲಯ ಅನುಷ್ಠಾನಗೊಂಡು ಮೂರು ವರ್ಷಗಳು ಕಳೆದಿವೆ. ಗುತ್ತಿಗೆ ಕಂಪನಿ ಎರಡು ವರ್ಷ ಮಾತ್ರ ನಿರ್ವಹಣೆ ಮಾಡಿದೆ. ಮತ್ತೆ ಹೊಸದಾಗಿ ಅಳವಡಿಸಲು ಹೆಚ್ಚು ಖರ್ಚು ತಗಲುತ್ತದೆ’ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.