ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ಜಿಲ್ಲಾ ಮಹಿಳಾ ಸಮ್ಮೇಳನ: ಭವಿಷ್ಯದ ಚಿಂತನೆ ಅಗತ್ಯ; ಮಾಳವಿಕಾ ಅವಿನಾಶ್

Published 4 ಡಿಸೆಂಬರ್ 2023, 6:44 IST
Last Updated 4 ಡಿಸೆಂಬರ್ 2023, 6:44 IST
ಅಕ್ಷರ ಗಾತ್ರ

ಪುತ್ತೂರು: ‘ಲವ್ ಜಿಹಾದ್ ಮೂಲಕ ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೆ ಒಳಗಾಗುವುದರಿಂದ ನಾವು ಏನೆಲ್ಲಾ ಕಳೆದುಕೊಳ್ಳುತ್ತೇವೆ ಎಂಬುದನ್ನು ಯುವತಿಯರು ಯೋಚಿಸಬೇಕಾದ, ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ’ ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಹೇಳಿದರು.

ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಭವನದಲ್ಲಿ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಹಮ್ಮಿಕೊಂಡಿದ್ದ ಮಹಿಳಾ ಸಮ್ಮೇಳನ ನಾರಿ ಶಕ್ತಿ ಸಂಗಮದಲ್ಲಿ ಅವರು ‘ಭಾರತೀಯ ಚಿಂತನೆಯಲ್ಲಿ ಮಹಿಳೆ’ ಕುರಿತು ಮಾತನಾಡಿದರು.

‘ಹಿಂದೂ ಧರ್ಮದಲ್ಲಿ ಏಕ ಪತ್ನಿ ಸಂಸ್ಕಾರವಿದ್ದು, ಮಹಿಳೆಯರು ಪತಿಯೊಂದಿಗೆ ಸಮಾನ ಹಕ್ಕುಗಳಿಗೆ ಬಾಧ್ಯಸ್ಥಳಾಗಿದ್ದರೆ, ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾಳೆ. ಅಲ್ಲದೆ, ಬಹುಪತ್ನಿತ್ವದ ಅಡಿ ಒಬ್ಬಳಾಗಿ ಬದುಕುವ ಅನಿವಾರ್ಯತೆ ಬರುತ್ತದೆ’ ಎಂದು ಅವರು ವಿಶ್ಲೇಷಿಸಿದರು.

‘ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ– ಮಹಿಳೆ ಎಂಬ ಬೇದ ಇರಲಿಲ್ಲ. ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕೆ ಇಲ್ಲ’ ಎಂದು ಅವರು ಹೇಳಿದರು.

ಸಮಾರೋಪ ಭಾಷಣ ಮಾಡಿದ ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆ ಲಕ್ಷ್ಮೀ ಎನ್.ಪ್ರಸಾದ್, ಹಿಂದೂ ಸಂಸ್ಕೃತಿ, ಪರಂಪರೆಯ ರಕ್ಷಣೆಯ ಹೊಣೆ ಮಹಿಳೆಯರ ಮೇಲಿದೆ. ಮಹಿಳೆಯರು ಕೀಳರಿಮೆಯನ್ನು ತೊಡೆದು ಹಾಕಿ ಮೀಸಲಾತಿಯ ಹಂಗಿಲ್ಲದೆ ಮಹಿಳೆ ಅನಿವಾರ್ಯ ಎನ್ನುವಂತಾಗಬೇಕು. ನಮ್ಮ ಗುರಿ ವಿಕಾಸದ ಕಡೆಗೆ ಇರಬೇಕೇ ಹೊರತು ಆಕ್ರಮಣದ ಮೇಲಲ್ಲ. ಸಮಾಜಕ್ಕೆ ನಾವು ನೀಡಬೇಕಾಗಿರುವ ಕೊಡುಗೆಯ ಕುರಿತು ಚಿಂತನೆ ನಡೆಸಬೇಕಾಗಿದೆ’ ಎಂದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿ ಸುಗುಣ ಇದ್ದರು.

ರೂಪಲೇಖಾ ಸ್ವಾಗತಿಸಿದರು. ವಿದ್ಯಾಗೌರಿ ವಂದಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ವೈದ್ಯೆ, ಸಮಾಜ ಸೇವಕಿ ಗೌರಿ ಪೈ ಮಹಿಳಾ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಕಮಲಾ ಪ್ರಭಾಕರ ಭಟ್ ಅವರು ಗೌರಿ ಪೈ ಅವರನ್ನು ಗೌರವಿಸಿದರು. ವಿದುಷಿ ಪ್ರೀತಿಕಲಾ ವೈಯಕ್ತಿಕ ಗೀತೆ ಹಾಡಿದರು. ಸಮ್ಮೇಳನದ ವಿಭಾಗ ಸಹ ಸಂಚಾಲಕರಾದ ಗುಣವತಿ ಕೊಲ್ಲಂತಡ್ಕ ಪ್ರಸ್ತಾವಿಸಿದರು. ಶ್ರದ್ಧಾ ರೈ ಉಪಸ್ಥಿತರಿದ್ದರು. ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿಯರಾದ ತೇಜಸ್ವಿನಿ ಶೇಖರ್ ಕಟ್ಟಪುಣಿ ಸ್ವಾಗತಿಸಿ, ಸುಗುಣ ವಂದಿಸಿದರು. ವಿಜಯ ಸರಸ್ವತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT