ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಪಾಕಶಾಲೆಯಾದ ಪಾಠಶಾಲೆ, ಬಾಣಸಿಗರಾದ ಉಪನ್ಯಾಸಕರು, ತರಗತಿಯೇ ಅಡುಗೆ ಮನೆ

ಬಾಣಸಿಗರಾದ ಉಪನ್ಯಾಸಕರು, ತರಗತಿಯೇ ಅಡುಗೆ ಮನೆ
Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ಪುತ್ತೂರು: ‘ಕೋವಿಡ್–19’ ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಲುವಾಗಿ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯು ಸದ್ಯದ ಮಟ್ಟಿಗೆ ಪಾಠದ ಬದಲು ಪಾಕಶಾಲೆಯಾಗಿ ಬದಲಾಗಿದೆ.

ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ವರ್ಗದಿಂದ ಆಹಾರೋತ್ಪನ್ನಗಳನ್ನು ತಯಾರಿಸುವ ಪ್ರಯತ್ನ ಆರಂಭಗೊಂಡಿದ್ದು, ಬದುಕಿನ ಪಾಠಕ್ಕೆ ವಿದ್ಯಾಲಯ ಸಾಕ್ಷಿಯಾಗಿದೆ.

ಕೋವಿಡ್–19 ಪರಿಣಾಮ ಈ ವರ್ಷ ವಿದ್ಯಾಲಯದ ಪ್ರವೇಶಾತಿ ಆರಂಭಗೊಂಡಿಲ್ಲ. ಇದರಿಂದ ಎಲ್ಲ ಶಾಲಾ–ಕಾಲೇಜುಗಳಂತೆ ಅಂಬಿಕಾ ವಿದ್ಯಾಲಯವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೆಲವು ಶಾಲೆಗಳು ಶಿಕ್ಷಕರ ವೇತನಕ್ಕೆ ಕತ್ತರಿ ಹಾಕಿದರೆ, ಇನ್ನೂ ಕೆಲವರು ಶೇ10 ರಷ್ಟು ಶಿಕ್ಷಕರನ್ನು ಕೈ ಬಿಟ್ಟಿದ್ದಾರೆ. ಆದರೆ, ಈ ಸವಾಲು ಎದುರಿಸಲು ಸನ್ನದ್ಧವಾದ ಪುತ್ತೂರಿನ ಅಂಬಿಕಾ ವಿದ್ಯಾಲಯವು ‘ಶಿವಂ ಫುಡ್ ಫ್ರಾಡಕ್ಟ್' ಆರಂಭದ ಮೂಲಕ ಬದುಕು ಕಲ್ಪಿಸಿದೆ.

ಉಪನ್ಯಾಸಕ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ಸಣ್ಣ ಪ್ರಮಾಣದ ಆಹಾರ ಉದ್ಯಮ ಆರಂಭಿಸಿದ್ದಾರೆ. ಮೊದಲ ದಿನವಾದ ಜೂನ್‌ 22ರಂದು ಹಲಸಿನ ಸೋಳೆಯ ಚಿಪ್ಸ್ ಹಾಗೂ ಹಲಸಿನ ಬೀಜದ ಲಡ್ಡು ತಯಾರಿಸಿದ್ದಾರೆ.

ಕೊಠಡಿಯೇ ಅಡುಗೆ ಮನೆ

ಆಹಾರ ಉತ್ಪನ್ನಗಳ ತಯಾರಿಗೆ ಶಾಲೆಯ ಕೊಠಡಿಯನ್ನೇ ಬಳಸಲಾಗುತ್ತಿದೆ. ಶುಚಿತ್ವಕ್ಕಾಗಿ ಮಾಸ್ಕ್, ತಲೆಗವಸು ಹಾಗೂ ಕೈಗವಸುಗಳನ್ನು ಧರಿಸಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಇದರಲ್ಲಿ ಬಂದ ಆದಾಯವನ್ನು ತಮ್ಮೊಳಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಆಡಳಿತ ಮಂಡಳಿಯು ಸಿಬ್ಬಂದಿಯ ವಿನೂತನ ಪ್ರಯತ್ನಕ್ಕೆ ಅಗತ್ಯ ನೆರವು ಒದಗಿಸಿದೆ. ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ಅವರು ಪೂರ್ಣ ಬೆಂಬಲ ನೀಡುತ್ತಿದ್ದಾರೆ.

ನಂಬಿದವರಿಗೆ ಬದುಕು...

‘ನಮ್ಮನ್ನು ನಂಬಿ ಬಂದವರಿಗೆ ಅನ್ಯಾಯ ಆಗಬಾರದು ಎಂಬ ನೆಲೆಯಲ್ಲಿ ಈ ಪ್ರಯತ್ನ. ನಮ್ಮ ವಿದ್ಯಾಸಂಸ್ಥೆಯಲ್ಲಿ 90 ಮಂದಿ ಶಿಕ್ಷಕರಿದ್ದಾರೆ. ಸಂಬಳ ನೀಡುವುದೇ ಸವಾಲಾಗಿದೆ. ಪೋಷಕರೂ ಆತಂಕದಲ್ಲಿದ್ದಾರೆ. ಸಂಸ್ಥೆಯ ಸಿಬ್ಬಂದಿ ಎಲ್ಲರ ಜವಾಬ್ದಾರಿ ನಮ್ಮ ಮೇಲಿದ್ದು, ಹೋಮ್ ಪ್ರೊಡಕ್ಟ್ ಆರಂಭಿಸಿದ್ದೇವೆ. ಸುಮಾರು 35 ಸಿಬ್ಬಂದಿ ಸೇರಿಕೊಂಡು ಈ ಯೋಜನೆ ರೂಪಿಸಿದ್ದು, ನಮ್ಮ ಸಂಘದಿಂದ ₹50ಸಾವಿರ ನೀಡಿದ್ದೇವೆ’ ಎಂದು ಅಂಬಿಕಾ ವಿದ್ಯಾಲಯದ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದರು.

ಪೋಷಕರೇ ಮೊದಲ ಗ್ರಾಹಕರು..

ಶಿಕ್ಷಕರು ನಿರುದ್ಯೋಗಿಗಳಾಗದೆ, ಆರ್ಥಿಕ ಸಂಕಷ್ಟ ದೂರಮಾಡಲು ದಾರಿ ಕಂಡುಕೊಳ್ಳಬೇಕೆಂಬ ಉದ್ದೇಶಕ್ಕೆ ಆರಂಭವಾದ ಈ ಯೋಜನೆಗೆ ಆರಂಭಿಕ ಹಂತದಲ್ಲಿ ವಿದ್ಯಾಲಯದ ಮಕ್ಕಳ ಪೋಷಕರೇ ಗ್ರಾಹಕರಾಗಲಿದ್ದಾರೆ. ಶೀಘ್ರವೇ ಆನ್ಲೈನ್ ಖರೀದಿ ಹಾಗೂ ಹೋಂ ಡೆಲಿವರಿ ಆರಂಭಿಸುತ್ತೇವೆ ಎಂದು ನೇತೃತ್ವ ವಹಿಸಿರುವ ಉಪನ್ಯಾಸಕ ಸತೀಶ್ ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT